ಸೌರಭ್, ರಿತುಪರ್ಣ ಸೆಮಿ ಫೈನಲ್‌ಗೆ ಕಿಡಂಬಿ ಶ್ರೀಕಾಂತ್‌ಗೆ ಸೋಲು
ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ

ಲಕ್ನೊ, ನ.29: ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳಾದ ಸೌರಭ್ ವರ್ಮಾ ಹಾಗೂ ರಿತುಪರ್ಣ ದಾಸ್ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು. ಆದರೆ, ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿ ಕೂಟದಿಂದ ನಿರ್ಗಮಿಸಿದರು. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಭ್ ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್‌ಸರ್ನ್‌ರನ್ನು 21-19, 21-16 ಗೇಮ್‌ಗಳ ಅಂತರದಿಂದ ಮಣಿಸಿದರು. ಸೌರಭ್ ಮುಂದಿನ ಸುತ್ತಿನಲ್ಲಿ ಕೊರಿಯಾದ ಹಿಯೊ ಕ್ವಾಂಗ್ ಹೀ ಅವರನ್ನು ಎದುರಿಸಲಿದ್ದಾರೆ. 3ನೇ ಶ್ರೇಯಾಂಕದ ಶ್ರೀಕಾಂತ್ ವಿಶ್ವದ ಮಾಜಿ ನಂ.1 ಸನ್ ವಾನ್ ಹೊ ವಿರುದ್ಧ 18-21, 19-21 ಅಂತರದಿಂದ ಸೋತಿದ್ದಾರೆ. ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ರಿತುಪರ್ಣ ತನ್ನದೇ ದೇಶದ ಶುೃತಿ ಮುಡಾಡರನ್ನು 24-26, 21-10, 21-19 ಅಂತರದಿಂದ ಮಣಿಸಿದರು. ರಿತುಪರ್ಣ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಚೈವಾನ್ ಸವಾಲು ಎದುರಿಸಲಿದ್ದಾರೆ. ಮಹಿಳೆಯರ ಡಬಲ್ಸ್ ಜೋಡಿ ಕುಹೂ ಗರ್ಗ್ ಹಾಗೂ ಅನುಷ್ಕಾ ಪಾರಿಖ್ ಹಾಂಕಾಂಗ್‌ನ ವಿಂಗ್ ಯುನ್‌ಗಂಡ್ ಹಾಗೂ ಟಿಂಗ್‌ಗೆ 15-21, 9-21 ಅಂತರದಿಂದ ಸೋತಿದ್ದಾರೆ.





