ದಾವಣಗೆರೆ: ವಾಹನಗಳಿಗೆ 'ಫಾಸ್ಟ್ ಟ್ಯಾಗ್' ವಿರೋಧಿಸಿ ರೈತ ಸಂಘ ಪ್ರತಿಭಟನೆ

ದಾವಣಗೆರೆ, ನ.29 : ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಜಯದೇವ ವೃತ್ತದಿಂದ ಗಾಂಧಿ ವೃತ್ತ, ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ರೈತ ಸಂಘ-ಹಸಿರು ಸೇನೆಯ ಕಾರ್ಯಕರ್ತರು ಪ್ರಭಾರ ಅಪರ ಜಿಲ್ಲಾಧಿಕಾರಿ ಜಿ.ನಜ್ಮಾ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಕೇಂದ್ರ ಸರ್ಕಾರವು ಡಿ.1ರಿಂದ ಜಾರಿಗೊಳಿಸಲು ಮುಂದಾಗಿರುವ ವಾಹನಗಳ ಫಾಸ್ಟ್ ಟ್ಯಾಗ್ ನೀತಿಯಿಂದಾಗಿ ಸ್ಥಳೀಯರಿಗೆ, ರೈತರಿಗೆ, ವಾಹನ ಮಾಲಕರಿಗೆ ತೀವ್ರ ತೊಂದರೆಯಾಗಲಿದೆ ಎಂದರು.
ಫಾಸ್ಟ್ ಟ್ಯಾಗ್ ಜಾರಿ ಮುನ್ನ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿ ಸ್ಥಳೀಯರ ವಾಹನ ಸಂಚಾರಕ್ಕೆಂದು ಸರ್ವೀಸ್ ರಸ್ತೆ ನಿರ್ಮಿಸಬೇಕು. ಸರ್ವೀಸ್ ರಸ್ತೆ ನಿರ್ಮಿಸುವವರೆಗೂ ಫಾಸ್ಟ್ ಟ್ಯಾಗ್ ನೀತಿ ತಡೆ ಹಿಡಿಯಬೇಕು. ಹೆದ್ದಾರಿಗಳಲ್ಲಿ ರಸ್ತೆ ಅಪಘಾತವಾದಾದ ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಸರಿಯಾದ ಪ್ರಥಮ ಚಿಕಿತ್ಸೆ ಇಲ್ಲದೇ ಸಾಕಷ್ಟು ಜನ ಸಾವನ್ನಪ್ಪಿದ ನಿದರ್ಶನಗಳಿವೆ. ಇಂತಹ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಕೇಂದ್ರ ಮೊದಲು ಮಾಡಲಿ ಎಂದು ಅವರು ಆಗ್ರಹಿಸಿದರು.
ಒಂದು ಸಲ ಟೋಲ್ ಟಿಕೆಟ್ ಪಡೆದರೆ 24 ಗಂಟೆ ಕಾಲ ಎಷ್ಟು ಬಾರಿಯಾದರೂ ಸಂಚರಿಸಬಹುದಿತ್ತು. ಆದರೆ, ಇನ್ನು ಮುಂದೆ ವಾಹನ ಮಾಲಕರು ಹೈವೇ ಟೋಲ್‍ನಲ್ಲಿ ಪ್ರತಿ ಸಲವೂ ಹಣ ಕಟ್ಟಬೇಕು. ಇದರಿಂದ ವಾಹನ ಮಾಲಕರ ಜೇಬಿಗೆ ಕೇಂದ್ರ ಸರ್ಕಾರ ಕತ್ತರಿ ಹಾಕಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಫಾಸ್ಟ್ ಟ್ಯಾಗ್ ಜಾರಿಗೊಳಿಸುವ ನಿರ್ಧಾರ ತಕ್ಷಣವೇ ಕೈಬಿಡಬೇಕು ಎಂದು ಅವರು ತಾಕೀತು ಮಾಡಿದರು.
ಕೇಂದ್ರವು ಒಂದು ವೇಳೆ ಡಿ.1ರ ಒಳಗಾಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಹಾಕಿಸಿಕೊಳ್ಳದಿದ್ದರೆ ದುಪ್ಪಟ್ಟು ಹಣವನ್ನು ವಾಹನ ಸವಾರರು ಕಟ್ಟಬೇಕಾಗುತ್ತದೆ. ಮುಖ್ಯವಾಗಿ ದಾವಣಗೆರೆಯಿಂದ ತಾಲೂಕಿನ ಹೆಬ್ಬಾಳ್‍ವರೆಗೆ ಸರ್ವೀಸ್ ರಸ್ತೆಯೇ ಇಲ್ಲ. ಇದರಿಂದ ಸಾರ್ವಜನಿಕರು, ಸ್ಥಳೀಯರು ತಮ್ಮ ವಾಹನಗಳಿಗೆ, ರೈತರ ಟ್ರ್ಯಾಕ್ಟರ್ ಗಳಿಗೂ ತೊಂದರೆಯಾಗಲಿದೆ ಎಂದು ಅವರು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಒಡೆತನದ ಐಆರ್‍ಬಿ ಕಂಪನಿ ಬೊಕ್ಕಸ ತುಂಬಿಸಲು ಹುನ್ನಾರ ನಡೆಸಲಾಗುತ್ತಿದೆ. ಖಾಸಗಿ ಬ್ಯಾಂಕ್‍ಗಳ ಆರ್ಥಿಕ ಬೆಳವಣಿಗೆಗೂ ಸಹಕರಿಸುತ್ತಿರುವ ಕೇಂದ್ರವು ತಕ್ಷಣವೇ ಫಾಸ್ಟ್ ಟ್ಯಾಗ್ ತೆಗೆದು ಹಾಕಿ, ಹಿಂದೆ ಇದ್ದ ಕಾನೂನನ್ನೇ ಮುಂದುವರಿಸರಿ. ಈ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಿ ಎಂದು ಅವರು ತಾಕೀತು ಮಾಡಿದರು.
ಮುಖಂಡರಾದ ಯಲೋದಹಳ್ಳಿ ರವಿಕುಮಾರ, ಕಾಡಜ್ಜಿ ಪ್ರಕಾಶ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಚಿಕ್ಕ ಬೂದಿಹಾಳ್ ಭಗತ್ ಸಿಂಹ, ನಿಟುವಳ್ಳಿ ಅಂಜಿನಪ್ಪ ಪೂಜಾರ, ಸೂರ್ಯಪ್ಪ, ಅರಸನಾಳು ಸಿದ್ದಪ್ಪ, ಗುಮ್ಮನೂರು ಬಸವರಾಜ, ಕೋಲ್ಕುಂಟೆ ಬಸವರಾಜ, ಕುಕ್ಕವಾಡ ಪರಮೇಶ, ಆಲೂರು ಪರಶುರಾಮ, ಚಿರಂಜೀವಿ, ಹುಚ್ಚವ್ವನಹಳ್ಳಿ ಪ್ರಕಾಶ, ಜಗಳೂರು ಸತೀಶ, ಜಿ.ವೀರಣ್ಣ, ಕರಿಲಕ್ಕೇನಹಳ್ಳಿ ನಾಗಪ್ಪ, ಜಿ.ಎಂ.ಕುಬೇಂದ್ರಪ್ಪ, ನಾಗರಾಜ, ಕೋಲ್ಕುಂಟೆ ಉಚ್ಚೆಂಗೆಪ್ಪ, ಕೆ.ಬಿ.ಲೋಕೇಶ ನಾಯ್ಕ, ಶಾಂತಪ್ಪ, ಅಂಜಿನಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.







