ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ಜನತೆ ದಂಗೆ ಏಳಲಿದ್ದಾರೆ: ದಿನೇಶ್ ಗುಂಡೂರಾವ್

ಹೊಸಪೇಟೆ, ನ. 30: ‘ಉಪಚುನಾವಣೆ ಫಲಿತಾಂಶದ ನಂತರ ಒಂದು ವೇಳೆ ಬಿಜೆಪಿ ಪುನಃ ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ರಾಜ್ಯದ ಜನತೆ ದಂಗೆ ಏಳಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ಶನಿವಾರ ಹೊಸಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ಎರಡನೆ ಹಂತದ ಆಪರೇಷನ್ ಕಮಲ ನಡೆದರೆ, ಬಿಜೆಪಿ ವಿರುದ್ಧ ಜನ ತಿರುಗಿಬೀಳಲಿದ್ದಾರೆ ಎಂದು ಹೇಳಿದರು.
ಬಿಜೆಪಿಯ ಅನೈತಿಕ ರಾಜಕಾರಣ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ಕೃತ್ಯವನ್ನು ಕಂಡು ಜನರಿಗೆ ಹೇಸಿಗೆ ಬಂದಿದೆ ಎಂದ ಅವರು, ಡಿ.9ರ ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಗಳು ಆಗಲಿವೆ ಎಂದು ನುಡಿದರು.
ಶಾಸಕ ಬಿ.ನಾಗೇಂದ್ರ ಅವರು ಅನಾರೋಗ್ಯದ ನಿಮಿತ್ತ ಪ್ರಚಾರಕ್ಕೆ ಬಂದಿಲ್ಲ. ಅವರೂ ಸೇರಿದಂತೆ ಯಾರೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದ ಅವರು, ಜೆಡಿಎಸ್‌ನೊಂದಿಗೆ ಮೈತ್ರಿ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಆದರೆ, ರಾಜ್ಯದಲ್ಲಿ ಬದಲಾವಣೆ ನಿಶ್ಚಿತ ಎಂದರು.
ಮುಖಭಂಗ: ಮಹಾರಾಷ್ಟ್ರದಲ್ಲಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಈಗ ಬಿಜೆಪಿಯೊಂದಿಗೆ ಮೈತ್ರಿಗೆ ಯಾರೂ ಮುಂದಾಗುತ್ತಿಲ್ಲ. ಮೋದಿ, ಅಮಿತ್ ಶಾ ಸರ್ವಾಧಿಕಾರ ಧೋರಣೆ ಸಲ್ಲ ಎಂದು ಆಕ್ಷೇಪಿಸಿದರು







