ಹೋದಲ್ಲೆಲ್ಲ ಅನರ್ಹರಿಗೆ ಜನರಿಂದ ಛೀಮಾರಿ: ದಿನೇಶ್ ಗುಂಡೂರಾವ್

ಬಳ್ಳಾರಿ, ನ.30: ಸುಪ್ರೀಂಕೋರ್ಟ್, ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹತೆಯ ಆದೇಶ ಎತ್ತಿಹಿಡಿದಿದೆ. ಅನರ್ಹರಿಗೆ ಶಾಸಕರಾಗುವ ಯೋಗ್ಯತೆ ಇದೆಯೇ ಎಂದು ಜನತಾ ನ್ಯಾಯಾಲಯ ತೀರ್ಪು ನೀಡುವುದಷ್ಟೆ ಬಾಕಿಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಹೊಸಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ದುರಾಸೆ, ಅಧಿಕಾರಕ್ಕಾಗಿ ಜನರ ತೀರ್ಪಿಗೆ ದ್ರೋಹ ಬಗೆದವರು ಶಾಸಕರಾಗಲು ಅರ್ಹರೆ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದರು.
ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಪರ ಅಲೆ ಇದ್ದ ಕಾರಣಕ್ಕೆ ಅನರ್ಹರು ಕಾಂಗ್ರೆಸ್ ಪಕ್ಷದ ಬಿ ಫಾರಂ ಪಡೆದುಕೊಂಡರು. ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗುವುದಷ್ಟೇ ಅವರ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿ ಕಾಂಗ್ರೆಸ್‌ನಲ್ಲಿ ಇದ್ದರೇ ಹೊರತು ಕ್ಷೇತ್ರದ ಅಭಿವೃದ್ಧಿಗಾಗಿ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅನರ್ಹರು ಹೋದಲ್ಲೆಲ್ಲ ಜನ ಏಕೆ ಛೀಮಾರಿ ಹಾಕುತ್ತಿದ್ದಾರೆ? ಮರ್ಯಾದೆ ಏಕೆ ತೆಗೆಯುತ್ತಿದ್ದಾರೆ? ಹಳ್ಳಿಗಳಲ್ಲಿ ಹೋಗಲು ಏಕೆ ಬಿಡುತ್ತಿಲ್ಲ? ಅಥಣಿಯ ಸ್ವಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಫ್ಲೆಕ್ಸ್ ಏಕೆ ಹಾಕಿದ್ದಾರೆ? ಪ್ರಚಾರಕ್ಕೆ ಬೆಂಗಾವಲಿಗೆ ಜನರನ್ನ ಕರೆದುಕೊಂಡು ಹೋಗುವ ಸ್ಥಿತಿ ಯಾಕಿದೆ? ಎಂದು ಅವರು ವಾಗ್ದಾಳಿ ನಡೆಸಿದರು.
ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಘಟಿಸಲಿವೆ. ಸಂವಿಧಾನ ವಿರೋಧಿ, ಅನೈತಿಕ ಬಿಜೆಪಿ ಸರಕಾರ ಅಸ್ತಿತ್ವ ಕಳೆದುಕೊಳ್ಳಲಿದೆ. ಖಂಡಿತವಾಗಿ ಉಪ ಚುನಾವಣೆ ಬಳಿಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇರುವುದಿಲ್ಲ. ಮೋಸಗಾರರು, ದ್ರೋಹಿಗಳನ್ನು ಸೋಲಿಸುವ ಮೂಲಕ ರಾಜಕೀಯ ಶುದ್ಧೀಕರಣ ಆಗುವುದು ಈಗ ಮುಖ್ಯ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇಡೀ ದೇಶದಲ್ಲೇ ಬಿಜೆಪಿ ತಲೆ ತಗ್ಗಿಸುವಂತಹ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಂತಹದೇ ಘಟನೆ ಕರ್ನಾಟಕದಲ್ಲೂ ನಡೆಯಲಿದೆ. ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗೆ ಮತ್ತೆ ಮುಖಭಂಗ ಆಗಲಿದೆ. ರಾಜ್ಯದ ಸ್ವಾಭಿಮಾನಿ ಮತದಾರರು ಅಂತಹ ತೀರ್ಪನ್ನು ನೀಡಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.







