‘ಮೂಕಜ್ಜಿಯ ಕನಸುಗಳು’ ಒಂದು ಸದಭಿರುಚಿಯ ಚಿತ್ರ: ಪಿ.ಶೇಷಾದ್ರಿ

ಮಣಿಪಾಲ, ನ.30: ನನ್ನ ಮಟ್ಟಿಗೆ ಚಲನಚಿತ್ರಗಳಲ್ಲಿ ವರ್ಗೀಕರಣಗಳಿಲ್ಲ. ಇರುವುದು ಒಳ್ಳೆಯ ಸಿನಿಮಾ ಮತ್ತು ಕೆಟ್ಟ ಸಿನಿಮಾ ಮಾತ್ರ. ಹೀಗಾಗಿ ನನ್ನ ನಿರ್ದೇಶನದ ‘ಮೂಕಜ್ಜಿಯ ಕನಸುಗಳು’ ಚಿತ್ರ ಒಂದು ಸದಭಿರುಚಿಯ ಚಿತ್ರ ಎಂಬುದು ನನ್ನ ಅನಿಸಿಕೆ ಎಂದು ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ ಹೇಳಿದ್ದಾರೆ.
ನಿನ್ನೆ ರಾಜ್ಯಾದ್ಯಂತ ಬಿಡುಗಡೆ ಕಂಡ ಖ್ಯಾತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರದ ಕುರಿತು ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತಿದ್ದರು.
ಹೀಗಾಗಿ ‘ಮೂಕಜ್ಜಿಯ ಕನಸುಗಳು’ ಚಿತ್ರವನ್ನು ಕಮರ್ಷಿಯಲ್ ಚಿತ್ರ ಅಥವಾ ಕಲಾತ್ಮಕ (ಆರ್ಟ್) ಚಿತ್ರವೆಂದು ವರ್ಗೀಕರಿಸುವುದನ್ನು ನಾನು ಒಪ್ಪುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಇದನ್ನು ಬೇಕಿದ್ದರೆ ಸದುದ್ದೇಶದ ಚಿತ್ರ ಅಥವಾ ಸದಭಿರುಚಿಯ ಚಿತ್ರವೆಂದು ಬೇಕಿದ್ದರೆ ಕರೆಯಿರಿ ಎಂದರು.
1968ರಲ್ಲಿ ಮೊದಲಬಾರಿಗೆ ಪ್ರಕಟಗೊಂಡ ಡಾ.ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಇದೀಗ 50ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ವಿಜೇತ ಈ ಕಾದಂಬರಿ ತೆರೆಗೆ ಬಂದಿರುವುದು ಕನ್ನಡಿಗರಿಗೆ ಸಂಭ್ರಮದ ಕ್ಷಣವಾಗಬೇಕು. ಆದರೆ ನಿನ್ನೆ ಬಿಡುಗಡೆಗೊಂಡ ಈ ಚಿತ್ರಕ್ಕೆ ಕನ್ನಡಿಗರ ಪ್ರೋತ್ಸಾಹ ಅದರಲ್ಲೂ ವಿಶೇಷವಾಗಿ ಕಾರಂತರ ಹುಟ್ಟೂರಾದ ಕರಾವಳಿಯಲ್ಲಿ ಸಿಕ್ಕಿದ ಬೆಂಬಲ ನಿರಾಶಾದಾಯಕ ಎಂದವರು ನುಡಿದರು.
ಕುಂದಾಪುರದಲ್ಲಿ ನಿನ್ನೆ ಚಿತ್ರವನ್ನು ವೀಕ್ಷಿಸಿದವರ ಸಂಖ್ಯೆ ಕೇವಲ 19 ಮಂದಿ. ಮಣಿಪಾಲದಲ್ಲೂ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಜನರ ಪ್ರತಿಕ್ರಿಯೆ ತೃಪ್ತಿಕರವಾಗಿತ್ತು. ಸೀಮಿತ ಮಾರುಕಟ್ಟೆ ಇರುವ ರಾಜ್ಯದಲ್ಲಿ ಕನ್ನಡಿಗರಿಂದ ಯಾಕೆ ಇಂಥ ನಿರಾಶಜನಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದು ತಮಗೆ ಗೊತ್ತಾಗುತ್ತಿಲ್ಲ ಎಂದು ಕನ್ನಡಕ್ಕೆ 10ಕ್ಕೂ ಅಧಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿರುವ ಶೇಷಾದ್ರಿ ನುಡಿದರು.
ಮೂಕಜ್ಜಿ ಚಿತ್ರ ನಿನ್ನೆ ಬಿಡುಗಡೆಗೆ ಮೊದಲೇ ಕೆನಡಾದ ಟೊರಂಟೊದಲ್ಲಿ ನಡೆದ ಚಿತ್ರೋತ್ಸವದಲ್ಲಿ, ಕೊಲ್ಕತ್ತಾ ಹಾಗೂ ಬೆಂಗಳೂರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದಿದೆ. ಬೆಂಗಳೂರಿನಲ್ಲಿ ಅದು ಪ್ರಶಸ್ತಿ ಯನ್ನೂ ಗೆದ್ದಿದೆ ಎಂದ ಅವರು ಚಿತ್ರ ಹೊರಗೆ ಹೆಸರು ಮಾಡಬಹುದು, ಪ್ರಶಸ್ತಿ ಪಡೆಯಬಹುದು. ಆದರೆ ಕರ್ನಾಟಕದಲ್ಲಿ ಅದಕ್ಕೆ ಬೆಂಬಲ ಸಿಗುತ್ತಿಲ್ಲ ಎಂದು ಅವರು ಬೇಸರಿಸಿದರು.
ಒಂದೇ ದಿನ 45 ಚಿತ್ರ ಬಿಡುಗಡೆ: ಬೆಂಗಳೂರು ನಗರದಲ್ಲಿ ನಿನ್ನೆ (ಶುಕ್ರವಾರ) ಒಂದೇ ದಿನ ಒಟ್ಟು 45 ಚಿತ್ರಗಳು ಬಿಡುಗಡೆಗೊಂಡು ಇತಿಹಾಸ ನಿರ್ಮಿಸಿದೆ. ಇವುಗಳಲ್ಲಿ 9 ಕನ್ನಡ ಚಿತ್ರಗಳು, 7 ತೆಲುಗು, 4 ಹಿಂದಿ, ತಮಿಳು, ಮಲಯಾಶ, ಬೋಜಪುರಿಯಂಥ ಚಿತ್ರಗಳು ಸೇರಿವೆ. 10 ಲಕ್ಷ ಕನ್ನಡಿಗರಿರುವ ಚೆನ್ನೈನಲ್ಲಿ, 25 ಲಕ್ಷ ಮಂದಿ ಇರುವ ಮುಂಬೈನಲ್ಲಿ, ದಿಲ್ಲಿಯಲ್ಲಿ ಎಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬುದನ್ನು ನೋಡಿದರೆ ನಮಗೆ ನಿರಾಶೆಯಾಗುತ್ತದೆ ಎಂದರು.
ಖಂಡಿತವಾಗಿ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಯಲ್ಲ. ಸೀಮಿತ ಮಾರುಕಟ್ಟೆಯ ಕನ್ನಡ ಚಿತ್ರರಂಗದಲ್ಲಿ ಕನ್ನಡಕ್ಕೆ ಅನ್ಯಭಾಷೆಯ ಚಿತ್ರಗಳೂ ತೀವ್ರ ಸ್ಪರ್ಧೆ ಒಡ್ಡುತ್ತಿವೆ. ಈಗ ಮಲ್ಟಿಫೆಕ್ಸ್‌ಗಳಲ್ಲಿ ಮೊದಲ ಮೂರು ದಿನಗಳಲ್ಲಿ ಚಿತ್ರ ನೋಡಿದ ಜನರನ್ನು ಆಧರಿಸಿ ಆ ಚಿತ್ರ ಓಡುತ್ತದೆ. ಇಂಥ ಚಿತ್ರವನ್ನು ಕನ್ನಡಿಗರು ನೋಡದಿದ್ದರೆ, ಸೋಮವಾರ ಅದು ಥಿಯೇಟರಿನಲ್ಲೇ ಇರುವುದಿಲ್ಲ ಎಂದರು.
ಚಿತ್ರದ ನಟರಾದ ಶೀನ ಪಾತ್ರಧಾರಿ ಪ್ರದೀಪ್‌ಚಂದ್ರ ಕುತ್ಪಾಡಿ, ಸುಬ್ರಾಯ ಪಾತ್ರಧಾರಿ ಅರವಿಂದ ಕುಪ್ಳೀಕರ್ ಹಾಗೂ ಬೇಬಿ ಶ್ಲಾಘ ಸಾಲಿಗ್ರಾಮ ಉಪಸ್ಥಿತರಿದ್ದರು.
ಮುಂದಿನ ಚಿತ್ರ ‘ಮೋಹನದಾಸ’!
ತನ್ನ ಚಿತ್ರವೊಂದು ಸೋಲಲಿ, ಗೆಲ್ಲಲಿ ನಾನು ಚಿತ್ರ ನಿರ್ದೇಶನವನ್ನು ನಿಲ್ಲಿಸುವುದಿಲ್ಲ. ನನ್ನ ಮುಂದಿನ ಚಿತ್ರ ಗಾಂಧೀಜಿಯ ಬದುಕನ್ನು ಕುರಿತ ‘ಮೋಹನದಾಸ’, ಈಗಾಗಲೇ ಸೆನ್ಸಾರ್‌ಗೊಂಡು ಬಿಡುಗಡೆಗೆ ಸಿದ್ಧವಿದೆ. ಬೊಳುವಾರು ಅವರ ‘ಪಾಪು ಗಾಂಧಿ, ಬಾಪು ಗಾಂಧಿ ಆದ ಕತೆ’ ಹಾಗೂ ಗಾಂಧೀಜಿ ಅವರ ಆತ್ಮಚರಿತ್ರೆಯನ್ನು ಆಧರಿಸಿ ಈ ಚಿತ್ರವನ್ನು ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ನಿರ್ಮಿಸಿದ್ದೇನೆ.’ ಎಂದು ಪಿ.ಶೇಷಾದ್ರಿ ನುಡಿದರು.
ಗಾಂಧೀಜಿ ಅವರ 150ನೇ ವರ್ಷಾಚರಣೆಯ ಅಂಗವಾಗಿ ಈ ಚಿತ್ರ ನಿರ್ಮಾಣಗೊಂಡಿದೆ. ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೋರಿಸುವ ಆಶೆ ಇದೆ. ಹೀಗಾಗಿ ಮುಂದಿನ ಜನವರಿ ತಿಂಗಳಲ್ಲಿ ಇದು ಬಿಡುಗಡೆಗೊಳ್ಳಬಹುದು ಎಂದರು.
ಇದು ಬಿಟ್ಟರೆ ಕಿಟ್ಟೆಲ್ ಬಗ್ಗೆ ಚಿತ್ರ ತಯಾರಿಸುವ ಯೋಜನೆ ಇದೆ. ಅದೇ ರೀತಿ ‘ರಾಮಾಯಣ’ ಹಾಗೂ ರಾವ್ ಬಹಾದ್ದೂರ್ ಅವರ ‘ಗ್ರಾಮಾಯಣ’ ವನ್ನೂ ಚಲನಚಿತ್ರವಾಗಿಸುವ ಒಂದು ಯೋಚನೆ ಇದೆ. ಯಾವುದು ಸಾಕಾರ ಗೊಳ್ಳುತ್ತದೆ ನೋಡಬೇಕಾಗಿದೆ ಎಂದರು.







