ಸಿಂಡಿಕೇಟ್ ಬ್ಯಾಂಕಿನ ವಿಲೀನ ವಿರೋಧಿಸಿ ರಕ್ತದಾನ ಶಿಬಿರ

ಉಡುಪಿ, ನ.30: ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಣಯವನ್ನು ವಿರೋಧಿಸಿ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ವತಿಯಿಂದ ಪ್ರತಿಭಟನಾರ್ಥ ರಕ್ತದಾನ ಶಿಬಿರವನ್ನು ಶನಿವಾರ ಮಣಿಪಾಲದ ಸಿಂಡಿಕೇಟ್ ಹೌಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಟಿ.ಅಶೋಕ್ ಪೈ ಮಾತನಾಡಿ, ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣದ ಸಂದರ್ಭ ಡಾ.ಟಿ.ಎಂ.ಎ. ಪೈ ಅವರು, ನಾವು ಬೆಳೆಸಿದ ಬ್ಯಾಂಕ್‌ನ್ನು ಭಾರತ ಸರಕಾರಕ್ಕೆ ಧಾರೆ ಎರೆದು ಕೊಡುತ್ತಿರುವ ಬಗ್ಗೆ ಹೆಮ್ಮೆ ಇದೆ ಹಾಗೂ ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದರು. ಆದರೆ ಇಂದು ಕೇಂದ್ರ ಸರಕಾರದ ವಿಲೀನ ಪ್ರಕ್ರಿಯೆ ಘೋಷಿಸಿರುವುದರಿಂದ ನಮ್ಮ ಬ್ಯಾಂಕ್ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಉಡುಪಿ ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ, ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರುದ್ಧದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿ ದರು. ಮಣಿಪಾಲ ಕೆಎಂಸಿ ಬ್ಲಡ್‌ಬ್ಯಾಂಕಿನ ವೈದ್ಯಾಧಿಕಾರಿ ಡಾ.ಶಮ್ಮಿ ಶಾಸ್ತ್ರೀ ರಕ್ತದಾನದ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಅಧಿಕಾರಿಗಳ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಸಂಜಯ್ ಮಂಜ್ರೆಕರ್, ಅಧ್ಯಕ್ಷ ಶಶಿಧರ್ ಶೆಟ್ಟಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ದಿನಕರ ಪೂಂಜಾ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಮುನ್ನೂರಕ್ಕೂ ಅಧಿಕ ಸಿಬಂದಿಗಳು ಭಾಗವಹಿಸಿ ರಕ್ತದಾನ ಮಾಡಿದರು.








