ವಿದ್ಯಾರ್ಥಿಗಳ ಸನ್ನಡೆತೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು: ಇಸಾಕ್ ಪುತ್ತೂರು

ಉಡುಪಿ, ನ.30: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆ ಹಾಗೂ ಜಮಾಅತೇ ಇಸ್ಲಾಮೀ ಹಿಂದ್ ಮಹಿಳಾ ಘಟಕ ಹೂಡೆ ಶಾಖೆಯ ಜಂಟಿ ಆಶ್ರಯದಲ್ಲಿ ಮಾದರಿ ಶಿಕ್ಷಕ ಪ್ರವಾದಿ(ಸ) ಬೆಳಕಿನಲ್ಲಿನ ವಿಚಾರಧಾರೆಯ ವಿಚಾರಗೋಷ್ಠಿಯು ಸಾಲಿಹಾತ್ ಶಾಲಾ ಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚಾರ್ಟಡ್ ಅಕೌಂಟೆಂಟ್ ಇಸಾಕ್ ಪುತ್ತೂರು ಮಾತನಾಡಿ, ನಾವೆಲ್ಲರೂ ನಮ್ಮ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಿದರೆ ಒಳ್ಳೆಯ ಸಮಾಜದ ನಿರ್ಮಾಣ ಸಾಧ್ಯ. ಶಿಕ್ಷಕರು ಕೇವಲ ಪಠ್ಯಪುಸ್ತಕದಲ್ಲಿರುವ ವಿಚಾರವಲ್ಲದೇ ಪ್ರಸಕ್ತ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲಬೇಕು. ವಿದ್ಯಾರ್ಥಿಗಳ ಸನ್ನಡೆತೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾ ಗಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಶಬಾನಾ ಮುಮ್ತಾಝ್, ಮುಖ್ಯ ಶಿಕ್ಷಕಿಯ ರಾದ ಸುನಂದಾ, ಲವೀನಾ ಕ್ಲಾರಾ, ಸಮೀನಾ ನಝೀರ್ ಮೊದಲಾದವರು ಉಪಸ್ಥಿತರಿದ್ದರು.
ಅರೇಬಿಕ್ ಕಾಲೇಜಿನ ಮುಖ್ಯಸ್ಥೆ ಕುಲ್ಸುಮ್ ಅಬೂಬಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ತಸ್ನೀಮ್ ಪ್ರಾರ್ಥನೆಗೈದರು. ಹೂಡೆಯ ಜಮಾಅತೆ ಇಸ್ಲಾಮೀ ಮಹಿಳಾ ಘಟಕದ ಅಧ್ಯಕ್ಷೆ ಜಮೀಲಾ ಇಸಾಕ್ ವಂದಿಸಿದರು.





