ಡಿಎಚ್‌ಓ ಆಗಿ ಡಾ.ಸುಧೀರ್‌ಚಂದ್ರ ಸೂಡ ನೇಮಕಕ್ಕೆ ವಿರೋಧ
ಕರ್ತವ್ಯ ಲೋಪದ ಎಸಗಿರುವ ವೈದ್ಯಾಧಿಕಾರಿಯನ್ನು ಕೈಬಿಡುವಂತೆ ಒತ್ತಾಯ
ಉಡುಪಿ, ನ.30: ಇಲಾಖಾ ಕಾನೂನು ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆ ಹೊಂದಿರುವ ಡಾ.ಸುಧೀರ್ ಚಂದ್ರ ಸೂಡ ಅವರನ್ನು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಾಗಿ ನೇಮಕ ಮಾಡಿರುವುದು ಖಂಡನೀಯ. ಕಳಂಕಿತರಾದ ಅವರನ್ನು ಈ ಸ್ಥಾನದಿಂದ ಕೈಬಿಟ್ಟು ಸೂಕ್ತ ಅರ್ಹ ವೈದ್ಯಾಧಿಕಾರಿಯನ್ನು ನಿಯೋಜಿಸಬೇಕು ಎಂದು ಆರ್‌ಟಿಐ ಕಾರ್ಯಕರ್ತ ಶಂಕರ ಶಾಂತಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಬಾರಕೂರು ಪ್ರಾಥಮಿಕ ಸರಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸುಧೀರ್‌ಚಂದ್ರ ಸೂಡ, ಬಿಪಿಎಲ್ ಪಡಿತರ ಚೀಟಿ ಹೊಂದಿದ್ದ ನಾನು 2014ರ ಜು.19ರಂದು ಹುಚ್ಚು ನಾಯಿ ಕಡಿತದಿಂದ ಕೇಂದ್ರಕ್ಕೆ ಚಿಕಿತ್ಸೆಗೆ ಹೋಗಿದ್ದಾಗ ಒಂದು ಡೋಸು ಚುಚ್ಚುಮದ್ದಿಗೆ 350ರೂ.ನಂತೆ ಪಡೆದು 100ರೂ.ಗೆ ರಶೀದಿ ನೀಡಿದ್ದರು ಎಂದು ದೂರಿದರು.
ಈ ಬಗ್ಗೆ ಪ್ರಶ್ನಿಸಿದಾಗ ಇಲಾಖೆಯಲ್ಲಿ ಈ ಔಷಧ ಲಭ್ಯ ಇಲ್ಲದಿರುವುದರಿಂದ ಖಾಸಗಿಯಾಗಿ ಖರೀದಿ ಮಾಡಬೇಕು. ಅದಕ್ಕೆ ಹಣ ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಔಷಧದ ಬಾಟಲಿ ಪರಿಶೀಲಿಸಿದಾಗ ಅದರಲ್ಲಿ ಇಲಾಖೆ ಸರಬರಾಜು ಮಾಡಿದ ಔಷಧಿ ಹಾಗೂ ಇದು ಮಾರಾಟ ಮಾಡ ಬಾರದು ಎಂಬುದಾಗಿ ನಮೂದಿಸಲಾಗಿತ್ತು. ಈ ಔಷಧಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸುತ್ತೋಲೆ ಇದ್ದು, ಅದರಂತೆ ಬಿಪಿಎಲ್ ಫಲಾನುಭವಿಗಳಿಗೆ ಎಲ್ಲ ಡೋಸ್‌ಗಳನ್ನು ಉಚಿತವಾಗಿ ನೀಡಬೇಕು ಎಂದು ಅವರು ತಿಳಿಸಿದರು.
ಈ ಬಗ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ನಿರ್ದೇಶನಾಲಯದ ಮುಖ್ಯ ಜಾಗ್ರತ ಅಧಿಕಾರಿ ತನಿಖೆ ನಡೆಸಿ ವರದಿಯನ್ನು ಇಲಾಖಾ ನಿರ್ದೇಶಕರಿಗೆ ಸಲ್ಲಿಸಿದ್ದರು. ಈ ತನಿಖೆಯಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾಗಿವೆ. ಅದೇ ರೀತಿ ಲೋಕಾಯುಕ್ತಕ್ಕೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆ ಪೂರ್ಣಗೊಂಡಿದ್ದು, ವೈದ್ಯಾಧಿಕಾರಿ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿದ್ದ ಡಾ. ಅಶೋಕ್ ಎಚ್. ಅವರನ್ನು ವರ್ಗಾವಣೆ ಮಾಡಿ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೂಡ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಾಗಿ ನೇಮಿಸಿರುವುದು ಆಕ್ಷೇಪಣೀಯ. ಇದರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಭೀಮವಾದ ಉಡುಪಿ ಜಿಲ್ಲಾ ಸಂಚಾಲಕ ವಿಶ್ವ ನಾಥ ಬೆಳ್ಳಂಪಳ್ಳಿ, ರಮೇಶ್ ಹರಿಖಂಡಿಗೆ, ವಿಜಯ ಕುಮಾರ್ ಬಾರಕೂರು ಉಪಸ್ಥಿತರಿದ್ದರು.
ಆರೋಪ ನಿರಾಧಾರ: ಡಿಎಚ್‌ಓ ಸ್ಪಷ್ಪನೆ
ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನನ್ನ ಅರ್ಹತೆಗೆ ತಕ್ಕಂತೆ ನಾನು ಕರ್ತವ್ಯ ಮಾಡುತ್ತಿದ್ದೇನೆ. ನನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಉಡುಪಿ ಜಿಲ್ಲಾ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಸ್ಪಷ್ಟನೆ ನೀಡಿದ್ದಾರೆ.
ಇಲಾಖೆಯಲ್ಲಿ ನಿರಂತರವಾಗಿ 20ವರ್ಷಗಳ ಸೇವೆ ಸಲ್ಲಿಸಿದವರನ್ನು ಡಿಎಚ್‌ಓ ಆಗಿ ನೇಮಕ ಮಾಡಲು ಅವಕಾಶ ಇದೆ. ಇಲಾಖಾ ತನಿಖೆಯಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪಗಳು ಆಧಾರ ರಹಿತ ಎಂಬುದಾಗಿ ಸಾಬೀತಾಗಿದೆ ಎಂದು ಅವರು ತಿಳಿಸಿದರು.