ಪರಸ್ಪರ ಗೌರವಭಾವನೆಯಿಂದ ಕಾಣುವುದು ಭಾರತೀಯ ಸಂಸ್ಕೃತಿ -ಆರಿಫ್ ಮುಹಮ್ಮದ್ ಖಾನ್
ಮಂಗಳೂರು, ನ. 30: ದೇಶದ ವೈವಿಧ್ಯತೆಯಿಂದ ಕೂಡಿದ ಆಚರಣೆ ಸ್ವೀಕರಿಸುವುದು ಮತ್ತು ಪರಸ್ಪರ ಗೌರವಭಾವನೆಯಿಂದ ಕಾಣುವುದು ಭಾರತೀಯ ಸಂಸ್ಕೃತಿ ಎಂದು ಕೇರಳದ ರಾಜ್ಯಪಾಲರಾದ ಆರಿಫ್ ಮುಹಮ್ಮದ್ ಖಾನ್ ತಿಳಿಸಿದ್ದಾರೆ.
ನಗರದ ಟಿ.ಎಂ.ಎ.ಪೈ ಸಭಾಂಗಣದಲ್ಲಿಂದು ನಡೆಯುತ್ತಿರುವ ಲಿಟ್ ಫೆಸ್ಟ್ ನ ಎರಡನೆ ದಿನದಲ್ಲಿ ಭಾರತದಲ್ಲಿ ಇಸ್ಲಾಂ ನಡೆದು ಬಂದ ದಾರಿ ಎಂಬ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಯತೆಗೆ ಧರ್ಮ ಮುಖ್ಯವಲ್ಲ:- ಯಾವೂದೇ ರಾಷ್ಟ್ರೀಯತೆಗೆ ಧರ್ಮ ಮುಖ್ಯವಾಗುವುದಿಲ್ಲ .ದೇಶದಲ್ಲಿ ಯಾವೂದೇ ಧರ್ಮದವರು ಇದ್ದರು ಅದು ರಾಷ್ಟ್ರೀಯತೆಗೆ ಸಮಸ್ಯೆಯಾಗುವುದಿಲ್ಲ. ಭಾರತದಲ್ಲಿ ವಿಭಜನೆ ಮಾತ್ರ ಧರ್ಮದ ಆಧಾರದಲ್ಲಿ ನಡೆಯಿತು. ಪ್ರಪಂಚದ ವಿವಿಧ ಕಡೆಗಳಲ್ಲಿ ಇದಕ್ಕೆ ಹಲವು ಉದಾಹಣೆಗಳಿವೆ. ಈಜಿಪ್ಟ್ ದೇಶದ ರಾಷ್ಟ್ರೀಯತೆ ಈಜಿಪ್ಟಿಯನ್ ಹೊರತು ಇಸ್ಲಾಂ ಎನ್ನುವುದಿಲ್ಲ. ಸೌದಿ ಅರೇಬಿಯಾದ ರಾಷ್ಟ್ರೀಯತೆ ಸೌದಿ ಅರೇಬಿಯನ್ ಹೊರತು ಇಸ್ಲಾಂ ಆಗಿರುವುದಿಲ್ಲ. ಈ ಅಂಶಗಳನ್ನು ಪರಿಗಣಿಸಿ ಒಂದು ದೇಶದ ರಾಷ್ಟ್ರೀಯತೆಗೆ ಒಂದು ಧರ್ಮ ಮುಖ್ಯ ವಾಗುವುದಿಲ್ಲ. ದೇಶದಲ್ಲಿ ಇಸ್ಲಾಂ ಹೇಗೆ ಹರಡಿಕೊಂಡಿದೆ ಎಂದರೆ ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ. ದಕ್ಷಿಣ ಭಾರತದ ಮುಸಲ್ಮಾನರು ಒಂದು ರೀತಿಯಲ್ಲಿ ಬದುಕುತ್ತಿದ್ದಾರೆ. ಉತ್ತರ ಭಾರತದ ಮುಸಲ್ಮಾನರು ಬೇರೆ ರೀತಿಯಲ್ಲಿ ಬದುಕುತ್ತಿದ್ದಾರೆ. ಶೈಕ್ಷಣಿಕವಾಗಿ ಸಾಧಿಸಿರುವ ಅಂಶಗಳು ಹಾಗೂ ಚಾರಿತ್ರಿಕ ಅಂಶಗಳು ಈ ವೈವಿಧ್ಯತೆಗೆ ಕಾರಣವಾಗಿದೆ. ದೇಶದ ಅಭಿವೃದ್ಧಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳು ಸಮರ್ಪಕವಾಗಿ ನಡೆಯುವುದು ಮುಖ್ಯವಾಗುತ್ತದೆ. ಈ ಅಂಶಗಳು ಸರಿಯಾದ ದಿಕ್ಕಿನಲ್ಲಿ ರಾಷ್ಟ್ರೀಯತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಆರಿಫ್ ಮುಹಮ್ಮದ್ ಖಾನ್ ತಿಳಿಸಿದ್ದಾರೆ.
ಧರ್ಮ ನಮ್ಮ ನಡುವೆ ಶಾಂತಿ ಸೌಹಾರ್ದತೆಗೆ ಸಹಕಾರಿಯಾಗಬೇಕು.ಜನರನ್ನು ಒಂದು ಗೂಡಿಸಲು ಧರ್ಮ ಗಳು ಸಹಕಾರಿ ಯಾಗಬೇಕು ಹೊರತು ವಿಘಟನೆಗೆ ಕಾರಣವಾಗಬಾರದು ಎಂದು ಮು ಹಮ್ಮದ್ ಖಾನ್ ತಿಳಿಸಿದ್ದಾರೆ. ಇಸ್ಲಾಂ ಧರ್ಮವೂ ಒಂದೇ ರೀತಿಯಲ್ಲಿ ಬೆಳೆದ ಧರ್ಮವಲ್ಲ ಅರಬ್ ದೇಶಗಳಿಂದ ಆರಂಭಗೊಂಡು ಜಗತ್ತಿನ ವಿವಿಧ ದೇಶಗಳಿಗೆ ವಿಸ್ತರಣೆ ಗೊಂಡಂತೆ ಹಲವು ವೈವಿಧ್ಯತೆಗಳನ್ನು ಒಳಗೊಂಡಿದೆ. ಇಸ್ಲಾಂ ಜ್ಞಾನ, ಬೌದ್ಧಿಕತೆಯ ನೆಲೆಯಲ್ಲಿ ಬೆಳೆಯುತ್ತಾ ಸಾಗಿದೆ. ಸೂಫಿ ಸಂತರು ಧರ್ಮದ ಆಳದಲ್ಲಿರುವ ಜ್ಞಾನದ ಶೋಧನೆಯಲ್ಲಿ ತೊಡಗಿ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಧರ್ಮ ಎನ್ನುವುದು ನಮ್ಮ ಸೃಷ್ಟಿಕರ್ತ ಮತ್ತು ಸೃಷ್ಟಿಸಿದ ಜಗತ್ತಿನ ನಡುವಿನ ಮಾಧ್ಯಮವೆಂದು ತಿಳಿಸಿದ್ದಾರೆ.
ಧರ್ಮ ನಮ್ಮೆಲ್ಲರಿಗೂ ಶಾಂತಿ ನೆಮ್ಮದಿಯಿಂದ ಬದುಕುವುದಕ್ಕೆ ಸಹಕಾರಿಯಾಗಬೇಕು ಎಂದು ಆರಿಫ್ ಮುಹಮ್ಮದ್ ಖಾನ್ ತಿಳಿಸಿದ್ದಾರೆ.
ಆಯೋಧ್ಯೆಯ ಬಾಬರಿ ಮಸೀದಿ -ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನ್ನು ಬಹುತೇಕ ಮುಸ್ಲಿಂರು ಸ್ವಾಗತಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು. ಸಂವಾದ ಗೋಷ್ಠಿಯನ್ನು ಪತ್ರಕರ್ತ ಜಗನ್ನಾಥನ್ ನಿರೂಪಿಸಿದರು. ಗಿರಿಧರ ಉಪಾಧ್ಯಾಯ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







