ಮಂಗಳೂರು : ಶಕ್ತಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ

ಮಂಗಳೂರು : ಶಾಲೆ ಒಂದು ಶೈಕ್ಷಣಿಕ ಪರಿವಾರ. ಈ ಪರಿವಾರದಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಪ್ರತಿ ವಿದ್ಯಾರ್ಥಿಯ ಮೇಲೆ ಸಮಪ್ರಮಾಣದ ಜವಾಬ್ದಾರಿ, ಹಕ್ಕನ್ನು ಹೊಂದಿರುತ್ತಾರೆ. ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಹಕಾರ ನೀಡುವಲ್ಲಿ ಗಮನಹರಿಸಬೇಕು. ಶಿಕ್ಷಕರು ಶಾಲೆಯಲ್ಲಿ ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರೇರಕ ಶಕ್ತಿಯಾಗುವಲ್ಲಿ ಪ್ರಯತ್ನಿಸಬೇಕು ಎಂದು ಮುಖ್ಯ ಅತಿಥಿಯಾದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದರು.
ಶಕ್ತಿ ಪಿ.ಯು.ಕಾಲೇಜು, ಶಕ್ತಿ ವಸತಿ ಶಾಲೆ ಮತ್ತು ಶ್ರೀ ಗೋಪಾಲಕೃಷ್ಣ ಪ್ರೀ ಶಾಲೆಯ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.
ಈ ವಿದ್ಯಾ ಸಂಸ್ಥೆಯು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದೆ. ಈ ಪ್ರೋತ್ಸಾಹವು ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಈ ಸಂಸ್ಥೆ ಶಿಕ್ಷಕರಿಗೆ ತಮ್ಮ ಶಾಲಾ ದಿನಗಳನ್ನು ಮರುಕಳಿ ಸಲು, ಮಕ್ಕಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶಕೊಡುತ್ತಿದೆ ಎಂದು ಅವರು ಹೇಳಿದರು.
ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ವಚ್ಛತೆಯನ್ನು ಅಳವಡಿಸಬೇಕು. ಅದು ಪರಿಸರ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆಯು ಆಗಿರಬೇಕು. ಈ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳ ಬದುಕಿಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸುವುದರ ಮೂಲಕ ತಮ್ಮ ಭವಿಷ್ಯನ್ನು ರೂಪಿಸಿಕೊಳ್ಳಬೇಕು ಮತ್ತು ಪೋಷಕರು ಇದರ ಸಂಪೂರ್ಣ ಲಾಭವನ್ನು ಪಡೆಯಬೇಕು ಎಂದು ಹೇಳಿದರು.
ಕ್ರೆಡೈ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಿ.ಬಿ ಮೆಹ್ತ ಮಾತನಾಡಿ, ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಮಾಜ ಹಾಗೂ ದೇಶಕ್ಕೆ ಕೊಡುಗೆಯನ್ನು ನೀಡುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ನಾಯಕರು. ಅವರು ವಿದ್ಯಾರ್ಥಿಗಳ ತಪ್ಪನ್ನು ತಿದ್ದಿ, ಉತ್ತಮ ಕೆಲಸಗಳಿಗೆ ಪ್ರೋತ್ಸಾಹಿಸಿ ಸರಿದಾರಿಯತ್ತ ಕೊಂಡೊಯ್ಯುವರು. ಇಂತಹ ನಾಯಕರನ್ನು ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವೂ ಹೌದು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಛಲ, ಆತ್ಮವಿಶ್ವಾಸ ಹಾಗೂ ಸಮಯ ಪರಿಪಾಲನೆಗೆ ಮಹತ್ವವನ್ನು ನೀಡಬೇಕು. ಗೆಲುವನ್ನು ಸ್ವಾಗತವೆಂಬಂತೆ ಪರಿಗಣಿಸಿ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು. ಬದುಕಿನಲ್ಲಿ ಏನನ್ನಾದರು ಸಾಧಿಸುವ ಗುರಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಹೊಂದಿರಬೇಕು, ಇದರಿಂದ ಬದುಕು ಉತ್ತಮ ಹಾಗೂ ಸರಳ ಸುಂದರವಾಗುತ್ತದೆ ಎಂದು ಅವರು ಹೇಳಿದರು.
ಶಾಲೆಯ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಜೀವನದಲ್ಲಿ ಸವಾಲುಗಳನ್ನು ಎದುರಿಸುವ ಮಾರ್ಗವನ್ನು ಕಲಿಸಬೇಕು. ಯಾವ ವಿದ್ಯಾರ್ಥಿ ತಾನು ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳನ್ನು ಗೌರವಿಸಿ ಜೀವನದುದ್ದಕ್ಕೂ ಸ್ಮರಿಸುತ್ತಾನೊ ಅವರ ಬದುಕು ಉಜ್ವಲವಾಗುತ್ತದೆ ಎಂದು ಶಕ್ತಿ ಎಜ್ಯುಕೇಶನ್ ಟ್ರಸ್ಟ್ ಸದಸ್ಯ ವಿ.ಕೆ ತಾಳಿತ್ತಾಯ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಉಪ ಮೇಯರ್ ಶಕೀಲಾ ಕಾವ, ಶಕ್ತಿನಗರ ವಾರ್ಡಿನ ಕಾರ್ಪೊರೇಟರ್ ವನಿತಾ ಪ್ರಸಾದ್, ಕಾರ್ಪೊರೇಟರ್ ಕಿಶೋರ್ ಉಪಸ್ಥಿತರಿದ್ದರು.
ಶಕ್ತಿ ಆಡಳಿತ ಮಂಡಳಿಯ ಸದಸ್ಯರಾದ ಸಂಜೀತ್ ನಾಯ್ಕ್ ಸ್ವಾಗತಿಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಮತ್ತು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ವಂದಿಸಿದರು. ನಂತರ ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







