ಚಳಿಗಾಲ ಆರಂಭದಲ್ಲೇ ರೋಗಗಳ ಉಲ್ಬಣ: ಜನತೆಯನ್ನು ಸಂಕಷ್ಟಕ್ಕೀಡುಮಾಡಿದ ವಿವಿಧ ಖಾಯಿಲೆಗಳು

ಬೆಂಗಳೂರು, ನ.30: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಎಲ್ಲಡೆ ಹಲವು ರೋಗಗಳು ಜನರನ್ನು ಬಾಧಿಸುತ್ತಿದ್ದು, ಬೆಂಗಳೂರು ನಗರದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಅಧಿಕವಾಗಿದೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ರೋಗಗಳು ಉಲ್ಬಣಗೊಳ್ಳುತ್ತವೆ. ಅದರಂತೆ ಈ ಬಾರಿಯೂ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ವಿವಿಧ ಖಾಯಿಲೆಗಳು ಸಾಮಾನ್ಯ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಅಧಿಕವಾಗುತ್ತಿದೆ.
ಬೆಂಗಳೂರು ನಗರದಲ್ಲಿ ಆಸ್ಪತ್ರೆಗೆ ಬರುವವರ ಸಂಖ್ಯೆ ಶೇ.25 ರಿಂದ 30 ರಷ್ಟು ಅಧಿಕವಾಗಿದೆ. ಶೀತ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುವವರು ಅಧಿಕ ಸಂಖ್ಯೆಯಲ್ಲಿದ್ದಾರೆ.
ಬೆಳಗ್ಗೆ, ಸಂಜೆ ಸಮಯದಲ್ಲಿ ಚಳಿ, ಮಧ್ಯಾಹ್ನದ ವೇಳೆ ಬಿಸಿಲಿನ ವಾತಾವರಣವಿದೆ. ಇದರಿಂದ ಮಕ್ಕಳು, ವೃದ್ಧರು ಸೇರಿದಂತೆ ವಯಸ್ಕರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಶೀತ, ಜ್ವರ ಸೇರಿದಂತೆ ವಾಂತಿ, ಭೇದಿ ಪ್ರಕರಣಗಳು ವರದಿಯಾಗುತ್ತಿವೆ.
ಚರ್ಮದ ಸಮಸ್ಯೆ ಕಾಡಲಿದೆ: ಚಳಿಗಾಲದಲ್ಲಿ ಶೀತ ಭಾದೆಯ ಜತೆಗೆ ಚರ್ಮದ ಸಮಸ್ಯೆಯೂ ಕಾಡಲಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಣ ಹಾಗೂ ಸೂಕ್ಷ್ಮಚರ್ಮದವರು ಈ ವೇಳೆ ಬಹಳಷ್ಟು ಮುಂಜಾಗ್ರತೆ ವಹಿಸಬೇಕಿದೆ. ಇಸುಬು, ಹುಳುಕಡ್ಡಿ, ತುರಿಕೆ, ತಲೆ ಹೊಟ್ಟು, ತುಟಿ ಹಾಗೂ ಹಿಮ್ಮಡಿ ಹೊಡೆತ ಸೇರಿದಂತೆ ಹಲವು ರೀತಿಯಲ್ಲಿ ಚರ್ಮದ ಸಮಸ್ಯೆ ಕಾಡಲಿದೆ. ಹೀಗಾಗಿ, ವೈದ್ಯರ ಸಲಹೆ ಪಡೆದು, ಅಗತ್ಯ ಕ್ರೀಮ್ ಬಳಸುವುದು ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರ ಸಲಹೆಗಳು:
- ಮಕ್ಕಳು ಹಾಗೂ ವೃದ್ಧರನ್ನು ಬೆಚ್ಚಗೆ ಇರಿಸಬೇಕು.
- ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು.
- ತಾಜಾ ಹಣ್ಣಿನ ರಸ ಸೇವಿಸಿ.
- ಮನೆಯ ಆಹಾರ ಸೇವನೆ ಮಾಡಿ.
- ಎಣ್ಣೆ ಹಾಗೂ ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ.
- ತಲೆಗೂದಲ ಆರೈಕೆ ಬಗ್ಗೆ ಗಮನವಿರಲಿ.
- ತಿಳಿ ಬಣ್ಣದ ಉಣ್ಣೆ, ಹತ್ತಿ ಬಟ್ಟೆ ಧರಿಸಿ.
- ಚಳಿಯ ಕಾರಣಕ್ಕಾಗಿ ನೀರು ಕುಡಿಯುವುದು ನಿಲ್ಲಿಸದಿರಿ.
-ಜನದಟ್ಟಣೆ, ಜಾತ್ರೆಗಳಲ್ಲಿ ಹೆಚ್ಚು ಪಾಲ್ಗೊಳ್ಳದಿರಿ.







