'ಜಿಡಿಪಿ ಕುಸಿತವಾಗಿದ್ದರೂ ಜಾಗತಿಕವಾಗಿ ಭಾರತದ ಬೆಳವಣಿಗೆ ಗಮನಾರ್ಹ'
ಕೇಂದ್ರ ಸಹಾಯಕ ಹಣಕಾಸು ಸಚಿವ ಅನುರಾಗ್ ಠಾಕೂರ್

ಮಂಗಳೂರು, ನ.30: ಜಿಡಿಪಿ ಕುಸಿತದ ಕುರಿತಂತೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಂಖ್ಯೆಯಲ್ಲಿ ಯಾವುದೇ ನಿರಾಕರಣೆ ಇಲ್ಲ. ಆದರೆ ಜಾಗತಿಕವಾಗಿ ಭಾರತದ ಬೆಳವಣಿಗೆ ಗಮನಾರ್ಹ ಎಂದು ಕೇಂದ್ರದ ಸಹಾಯಕ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಜಿಡಿಪಿ ಕುಸಿತದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಮಂಗಳೂರು ಲಿಟರರಿ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಆರ್ಥಿಕ ಪರಿಸ್ಥಿತಿ ಕುರಿತು ಲೆಕ್ಕ ಪರಿಶೋಧಕ ವಿವೇಕ್ ಮಲ್ಯರ ಜತೆಗಿನ ಸಂವಾದದಲ್ಲಿ ಈ ಪ್ರತಿಕ್ರಿಯೆ ನೀಡಿದರು.
ಭಾರತದ ಜಿಡಿಪಿ ಕುಸಿತದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪತ್ರಿಕೆಗಳಲ್ಲಿ ಅಂಕಿಅಂಶಗಳು ಪ್ರಕಟವಾಗಿವೆ. ಇವೆಲ್ಲಾ ಆವರ್ತನದ ಘಟನೆಯೇ ಹೊರತು ಬೇರೇನಲ್ಲ. ಆದರೆ ಭಾರತದ ಆರ್ಥಿಕತೆಯು ರಚನಾತ್ಮಕವಾಗಿ ಗಟ್ಟಿಯಾಗಿದೆ. ಅದಕ್ಕಾಗಿಯೇ ಜಗತ್ತು ನಮ್ಮ ಮೇಲೆ ವಿಶ್ವಾಸವಿರಿಸಿದೆ. ಅದರಿಂದಾಗಿಯೇ 64.7 ಮಿಲಿಯ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಮಗೆ ದೊರಕಿದೆ. 2013ರಲ್ಲಿ ನಮ್ಮ ಬೆಳವಣಿಗೆ ಶೇ.4.2ರಿಂದ 4.3 ಆಗಿತ್ತು. ಆ ಬಳಿಕ ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಬೆಳವಣಿಗೆ ದರವನ್ನು ಶೇ. 7.5 ಅಂದಾಜಿಸಲಾಗಿದೆ. ವಿದೇಶಿ ವಿನಿಮಯ ಸಂಗ್ರಹ ಚಾರಿತ್ರಿಕವಾಗಿ ಅತ್ಯಧಿಕ 447 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಭಾರತ ಆರ್ಥಿಕ ಬೆಳವಣಿಗೆ ಬಗ್ಗೆ ನಾವು ವಿಶ್ವಾಸವನ್ನು ಇರಿಸೇಕಾಗಿದೆ ಎಂದು ಅವರು ಹೇಳಿದರು.
2025ಕ್ಕೆ 5 ಟ್ರಿಲಿಯನ್ ಆರ್ಥಿಕತೆಯಾಗುವ ಗುರಿಯನ್ನು ಇರಿಸಲಾಗಿದೆ, ಅದರತ್ತ ನಾವು ಸರಿಯಾದ ಹೆಜ್ಜೆಯನ್ನೇ ಇರಿಸಿದ್ದೇವೆ, ಕಳೆದ ಐದು ವರ್ಷದಲ್ಲಿ ನಮ್ಮ ಆರ್ಥಿಕತೆ 1.8 ಟ್ರಿಲಿಯನ್‌ನಿಂದ 2.8 ಟ್ರಿಲಿಯನ್‌ಗೆ ಕ್ಷಿಪ್ರವಾಗಿ ಬೆಳೆದಿದೆ ಎಂದವರು ವಿಶ್ಲೇಷಿಸಿದರು.
10 ಸಾರ್ವಜನಿಕ ರಂಗದ ಬ್ಯಾಂಕ್‌ಗಳ ವಿಲೀನ ಮೂಲಕ 4ಕ್ಕೆ ತರಲಾಗಿದ್ದು, ಬ್ಯಾಂಕ್‌ಗಳ ಬಂಡವಾಳ ವಿಸ್ತಾರಗೊಂಡಿದೆ, ಕೇಂದ್ರವು ಬ್ಯಾಂಕ್‌ಗಳಿಗೆ 2.5 ಲಕ್ಷ ಕೋಟಿ ರೂ.ಮೊತ್ತವನ್ನು ಒದಗಿಸಿದ್ದು, ಹೆಚ್ಚಿನ ಸಾಲ ವಿತರಣೆ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚು ದುಡ್ಡಿನ ಹರಿದಾಟವಾಗುವ ಬಗ್ಗೆ ಕ್ರಮ ಜರಗಿಸಲಾಗಿದೆ. ಹೊಸ ಕೈಗಾರಿಕೆಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಶೇ.30ರಿಂದ 15ಕ್ಕೆ ಇಳಿಸಲಾಗಿದೆ. ಹಾಲಿ ಇರುವ ಕೈಗಾರಿಕೆಗಳಿಗೆ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿದೆ ಎಂದರು.
ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಹೆಜ್ಜೆ ಎಂದು ಬಣ್ಣಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಜನರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ತೆರಿಗೆ ಸಂಗ್ರಹ 7.4 ಲಕ್ಷ ಕೋಟಿ ರೂ.ಗಳಿಂದ 11.40 ಲಕ್ಷ ಕೋಟಿ ರೂ.ಗೆ ತಲಪಿದೆ ಎಂದು ಹೇಳಿದರು.
ಲಾಭದಲ್ಲಿದ್ದ ಬಿಪಿಸಿಎಲ್ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿರುವ ಕುರಿತಂತೆ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಅನುರಾಗ್ ಠಾಕೂರ್, ಸರಕಾರಿ ಒಡೆತನದ ಕಂಪನಿಗಳನ್ನು ಖಾಸಿಗಯವರಿಗೆ ಮಾರಾಟ ಮಾಡುವ ಕ್ರಮವನ್ನು ಸಮರ್ಥಿಸಿಕೊಂಡರು.
ನಷ್ಟವನ್ನುಂಟುಮಾಡುವ ಯಾವುದನ್ನಾದರೂ ನೀವು ಖರೀದಿಸುತ್ತೀರಾ ಎಂದು ಪ್ರಶ್ನಿಸಿದರಲ್ಲದೆ, ಖಾಸಗಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಸರಕಾರ ಮೂಲಭೂತ ಸೌಕರ್ಯಕ್ಕೆ ಹೂಡಿಕೆ ಮಾಡುವ ನಿಟ್ಟಿನಲ್ಲಿ ಇಂತಹ ಕಂಪನಿಗಳ ಮೇಲುಸ್ತುವಾರಿಯನ್ನು ಮಾತ್ರವೇ ವಹಿಸಿಕೊಂಡು ಮಾರಾಟಕ್ಕೆ ಮುಂದಾಗಿದೆ. ಮುಂದೆ ಭಾರತದ ಶಿಪ್ಪಿಂಗ್ ಕಾರ್ಪೊರೇಶನ್, ನಾರ್ತ್ ಈಸ್ಟರ್ನ್ ಇಲೆಕ್ಟ್ರಿಕ್ ಪವರ್ ಕಾರ್ಪೊರೇಶನ್ ಲಿಮಿಟೆಡ್ ಕೂಡಾ ಈ ಮಾರಾಟದ ಹಾದಿಯಲ್ಲಿವೆ ಎಂದು ಅವರು ಹೇಳಿದರು.







