ವದಂತಿಗಳು ನೋವುಂಟು ಮಾಡಿದೆ: ಡಾ. ಫಿರೋಝ್ ಖಾನ್

ವಾರಣಾಸಿ, ನ. 30: ವಿವಾದಕ್ಕಿಂತ ಹೆಚ್ಚಾಗಿ ಮಾಧ್ಯಮದಲ್ಲಿ ಪ್ರಕಟವಾದ ತನ್ನ ಬಗೆಗಿನ ವದಂತಿಗಳು ನೋವು ಉಂಟು ಮಾಡಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ಬೋಧನಾಂಗದ ಸಾಹಿತ್ಯ ವಿಭಾಗಕ್ಕೆ ಸಹ ಪ್ರಾಧ್ಯಾಪಕರಾಗಿ ನಿಯೋಜಿತರಾಗಿ ಪ್ರತಿಭಟನೆ ಎದುರಿಸಿರುವ ಡಾ. ಫಿರೋಝ್ ಖಾನ್ ಶುಕ್ರವಾರ ಹೇಳಿದ್ದಾರೆ.
‘‘ನಾನು ಎಲ್ಲಿ ವಾಸಿಸುತ್ತಿದ್ದೇನೆ, ಯಾರನ್ನು ಭೇಟಿಯಾಗುತ್ತಿದ್ದೇನೆ ಎಂಬ ಬಗ್ಗೆ ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಇದು ಅನ್ಯಾಯ’’ ಎಂದು ಅವರು ತಿಳಿಸಿದ್ದಾರೆ.
‘‘ನಾನು ಭೂಗತನಾಗಿದ್ದೇನೆ ಎಂದು ಕೆಲವರು, ನಾನು ನಾಪತ್ತೆಯಾಗಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲವರು ನನ್ನ ಬಗ್ಗೆ ಕಣ್ಮರೆ ಎಂಬ ಶಬ್ದ ಬಳಸುತ್ತಿದ್ದಾರೆ. ಇಂತಹ ಪದಗಳಿಂದ ನನಗೆ ತುಂಬಾ ನೋವು ಉಂಟಾಗಿದೆ. ಅವರು ಸತ್ಯದಿಂದ ಬಲು ದೂರ ಇದ್ದಾರೆ’’ ಎಂದು ಡಾ. ಖಾನ್ ಹೇಳಿದ್ದಾರೆ.
‘‘ವಾರಣಾಸಿ ತ್ಯಜಿಸಲು ನನಗೆ ಯಾವುದೇ ಕಾರಣ ಇಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಂತಹ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ನಾನು ಜವಾಬ್ದಾರಿಯುತ ಅಧ್ಯಾಪಕ’’ ಎಂದು ಖಾನ್ ತಿಳಿಸಿದ್ದಾರೆ.
ನನಗೆ ಶಾಂತಿಯಿಂದ ಬದುಕಲು ಹಾಗೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಅವಕಾಶ ಮಾಡಿಕೊಡಿ ಎಂದು ಫಿರೋಝ್ ಖಾನ್ ಮನವಿ ಮಾಡಿದ್ದಾರೆ.







