ಅನರ್ಹ ಶಾಸಕರಿಗೆ ಮತ ಕೇಳುವ ನೈತಿಕತೆ ಇಲ್ಲ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ನ. 30: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಶಿವರಾಜ್ ಪರವಾಗಿ ಕ್ಷೇತ್ರದ ಶಕ್ತಿಗಣಪತಿ ವಾರ್ಡ್‌ನಲ್ಲಿ ಬಹಿರಂಗ ಪ್ರಚಾರ ನಡೆಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಅನರ್ಹ ಶಾಸಕರಿಗೆ ಜನರ ಬಳಿಕ ಮತ ಕೇಳುವ ನೈತಿಕತೆ ಇಲ್ಲ. ಮತದಾರರಿಗೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ಪ್ರಚಾರದ ವೇಳೆ ಮಾತನಾಡಿದ ಅವರು, ಅನರ್ಹರನ್ನು ಉಪ ಚುನಾವಣೆಯಲ್ಲಿ ಮತದಾರರೆ ಸೋಲಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಿವರಾಜ್ ಕ್ಷೇತ್ರದಲ್ಲಿ ಮೂರು ಬಾರಿ ಕಾರ್ಪೊರೇಟರ್ ಆಗಿದ್ದು, ಇವರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಬಿಬಿಎಂಪಿಯಿಂದ ಉತ್ತಮವಾದ ಕಾಮಗಾರಿಗಳನ್ನು ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ಕೊಡುವಲ್ಲಿ ಯಶಸ್ವಿಯಾಗಿದ್ದು ಬೆಂಗಳೂರಿನ ಬಿಬಿಎಂಪಿಯಲ್ಲೆ ಮೊದಲ ಸ್ಥಾನದಲ್ಲಿ ಕೆಲಸ ಮಾಡಿರುವಂತಹ ಏಕೈಕ ಸದಸ್ಯ ಎಂದು ಬಣ್ಣಿಸಿದರು.
ಬಡವರು ಹಸಿವಿನಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ಯಶಸ್ವಿನಿ, ಶಾದಿಭಾಗ್ಯ ಸೇರಿ ಹಲವು ಜನಪ್ರಿಯ ಯೋಜನೆಗಳು ಎಲ್ಲ ವರ್ಗ, ಧರ್ಮದವರಿಗೆ ತಲುಪುವಂತೆ ಜಾರಿಗೆ ತರಲಾಯಿತು ಎಂದರು.
‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಬಸವಣ್ಣನ ಸಿದ್ದಾಂತವನ್ನು ಪಾಲಿಸಿ ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಮುಂದಿನ ದಿನಗಳಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಮಾದರಿ ಕ್ಷೇತ್ರ ನಿರ್ಮಾಣ ನನ್ನ ಗುರಿ’
-ಎಂ.ಶಿವರಾಜ್, ಕಾಂಗ್ರೆಸ್ ಅಭ್ಯರ್ಥಿ







