ರಿತುಪರ್ಣಾಗೆ ಸೆಮಿಫೈನಲ್‌ನಲ್ಲಿ ಸೋಲು
ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್

► ವನಿತೆಯರ ಸಿಂಗಲ್ಸ್ ನಲ್ಲಿ ಭಾರತದ ಸವಾಲು ಅಂತ್ಯ
ಲಕ್ನೊ, ನ.30: ಮಾಜಿ ರಾಷ್ಟ್ರೀಯ ಚಾಂಪಿಯನ್ ರಿತುಪರ್ಣಾ ದಾಸ್ ಶನಿವಾರ ನಡೆದ ಸಯ್ಯದ್ ಮೋದಿ ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ವನಿತೆಯರ ಸಿಂಗಲ್ಸ್ ನಲ್ಲಿ ಭಾರತದ ಆಟಗಾರ್ತಿಯರ ಸವಾಲು ಅಂತ್ಯ ಗೊಂಡಿದೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ರಿತುಪರ್ಣಾ ದಾಸ್ ಅವರು ಥಾಯ್ಲೆಂಡ್‌ನ ಫಿಟ್ಟಾಯಪೋರ್ನ್ ವಿರುದ್ಧ 22-24, 15-21 ಗೇಮ್‌ಗಳ ಅಂತರದಲ್ಲಿ ಸೋಲು ಅನುಭವಿಸಿದರು. 2016 ಮತ್ತು 2018 ರಲ್ಲಿ ಪೊಲೆಂಡ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ 23ರ ಹರೆಯದ ರಿತುಪರ್ಣಾ ದಾಸ್ ಅವರು 39 ನಿಮಿಷಗಳ ಕಾಲ ನಡೆದ ವನಿತೆಯರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಹಣಾಹಣಿ ನಡೆಸಿದರು. ಆದರೆ ಅವರ ಹೋರಾಟ ಫಲ ನೀಡಲಿಲ್ಲ. ವಿಶ್ವದ 40ನೇ ಶ್ರೇಯಾಂಕದ ರಿತುಪರ್ಣಾ ದಾಸ್ ಈ ವರ್ಷ ದುಬೈ ಇಂಟರ್‌ನ್ಯಾಶನಲ್‌ನಲ್ಲಿ ಫೈನಲ್‌ನಲ್ಲಿ ಸೋತಿದ್ದರು. ಕಳೆದ ವರ್ಷ ವಿಯೆಟ್ನಾಂ ಓಪನ್‌ನಲ್ಲಿ ಚೈವಾನ್ ವಿರುದ್ಧ ರಿತುಪರ್ಣಾ ಸೋಲು ಅನುಭವಿಸಿದ್ದರು.





