ನಿಯಮ ಉಲ್ಲಂಘಿಸಿ ಹಣ ಸಾಗಾಟ ಆರೋಪ: ಬ್ಯಾಂಕ್ ಹಿರಿಯ ಸಹಾಯಕ ಅಮಾನತು

ಮೈಸೂರು,ನ.30: ದಾಖಲೆಯಿಲ್ಲದೇ ನಿಯಮ ಬಾಹಿರವಾಗಿ 2 ಕೋಟಿ ರೂ. ಹಣವನ್ನು ಸಾಗಿಸುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದು, ಅದಕ್ಕೆ ಕಾರಣರಾಗಿದ್ದಾರೆ ಎನ್ನಲಾದ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಿರಿಯ ಸಹಾಯಕ ಚೇತನ್ ಬಾಬು ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅಮಾನತು ಮಾಡಿದ್ದಾರೆ.
ರಿಸರ್ವ್ ಬ್ಯಾಂಕ್ ನಿಯಮಾನುಸಾರ ಬ್ಯಾಂಕಿನ ಒಂದು ಬ್ರಾಂಚ್ ನಿಂದ ಮತ್ತೊಂದು ಬ್ರಾಂಚ್ ಗೆ ಬೃಹತ್ ಮೊತ್ತದ ಹಣವನ್ನು ಕೊಂಡೊಯ್ಯುವಾಗ ಅನುಸರಿಸಬೇಕಾದ ಕ್ರಮ ಕೈಗೊಂಡಿರದ ಕಾರಣ ಮಾರ್ಗಮಧ್ಯೆ ಮನುಗನಹಳ್ಳಿ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಕುರಿತು ಬ್ಯಾಂಕ್ ಅಧ್ಯಕ್ಷರಿಗಾಗಲಿ ಅಥವಾ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗಾಗಲೀ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳೂ ಅವರ ಬಳಿ ಇರಲಿಲ್ಲ ಎನ್ನಲಾಗಿದ್ದು, ನಿಯಮ ಉಲ್ಲಂಘಿಸಿ ಎರಡು ಕೋಟಿ ನಗದು ಹಣವನ್ನು ಎಂಸಿಡಿಸಿಸಿ ಬ್ಯಾಂಕ್ ಪಿರಿಯಾಪಟ್ಟಣ ಶಾಖೆಗೆ ಬ್ಯಾಂಕ್ ಹಿರಿಯ ಸಹಾಯಕ ಚೇತನ್ ಬಾಬು ಸಾಗಿಸುತ್ತಿದ್ದು, ಅವರು ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದ್ದು, ಈ ಆಧಾರದ ಮೇಲೆ ಅವರ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ.





