‘ಭಾರತ ಮೊದಲು’ ಎಂಬ ಪರಿಕಲ್ಪನೆಯ ಆರು ತಿಂಗಳು ಯಶಸ್ವಿ: ಮೋದಿ
ಎನ್ಡಿಎ ಸರಕಾರ 180 ದಿನ ಪೂರ್ತಿಗೊಳಿಸಿದ ಸಂದರ್ಭ ಟ್ವೀಟ್

Photo: PTI
ಹೊಸದಿಲ್ಲಿ, ನ.30: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಎರಡನೇ ಅವಧಿಯಲ್ಲಿ ದೇಶದ ಅಭಿವೃದ್ಧಿಗೆ ಉತ್ತೇಜನ ನೀಡುವ, ಸಾಮಾಜಿಕ ಸಬಲೀಕರಣಕ್ಕೆ ವೇಗ ನೀಡುವ ಹಾಗೂ ಏಕತೆಯನ್ನು ವರ್ಧಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡನೇ ಅವಧಿಯಲ್ಲಿ ಎನ್ಡಿಎ ಸರಕಾರ 180 ದಿನಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ‘ 6 ಮಂತ್ಸ್ ಆಫ್ ಇಂಡಿಯಾ ಫಸ್ಟ್’ ಎಂಬ ಹ್ಯಾಶ್ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಮೃದ್ಧ ಮತ್ತು ಪ್ರಗತಿಶೀಲ ನವಭಾರತದ ನಿರ್ಮಾಣದ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಆಕಾಂಕ್ಷೆಯಿದೆ ಎಂದು ತಿಳಿಸಿದ್ದಾರೆ.
ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂಬ ಧ್ಯೇಯದಿಂದ ಪ್ರೇರಿತರಾಗಿ ಮತ್ತು 130 ಕೋಟಿ ಭಾರತೀಯರ ಆಶೀರ್ವಾದದಿಂದ ಎನ್ಡಿಎ ಸರಕಾರ ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಮತ್ತು ಹೊಸ ಚೈತನ್ಯದೊಂದಿಗೆ ಭಾರತದ 130 ಕೋಟಿ ಜನರ ಬದುಕನ್ನು ಸಶಕ್ತಗೊಳಿಸುವ ಕಾರ್ಯವನ್ನು ಮುಂದುವರಿಸಲಿದೆ ಎಂದವರು ಹೇಳಿದ್ದಾರೆ.





