ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ತುಂತುರು ಮಳೆ

ಬೆಂಗಳೂರು, ಡಿ.1: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ರವಿವಾರ ಬೆಳಗ್ಗೆಯಿಂದಲೇ ದಿನವೀಡಿ ಜಿಟಿ ಜಿಟಿ ಮಳೆಯಾಗಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.
ರವಿವಾರ ರಜಾದಿನದಂದು ಮುಂಜಾನೆಯಿಂದಲೇ ಆರಂಭವಾದ ಮಳೆಯು ಜನರನ್ನು ಮನೆಯಿಂದ ಹೊರಗೆ ಕಾಲಿಡದಂತೆ ಮಾಡಿದೆ. ಇಡೀ ನಗರವೇ ಮೋಡ ಕವಿದಿದ್ದು, ಸಂಪೂರ್ಣ ಕತ್ತಲದಾದಂತೆ ಭಾಸವಾಗುತ್ತಿತ್ತು. ಅಲ್ಲದೆ, ತುಂತುರು ಮಳೆಯ ನಡುವೆ ಚಳಿಗಾಳಿಯಿಂದ ಜನತೆ ನಡುಗುವಂತಾಯಿತು.
ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ವೃತ್ತ, ಸಂಪಂಗಿ ರಾಮನಗರ, ಸ್ಯಾಟಲೈಟ್, ರಾಜಾಜಿನಗರ, ಹೆಬ್ಬಾಳ, ಬೊಮ್ಮನಹಳ್ಳಿ, ಎಂ. ಜಿ.ರಸ್ತೆ, ದೊಮ್ಮಲೂರು, ಶಾಂತಿನಗರ, ಇಂದಿರಾನಗರ, ಹಲಸೂರು, ಕೆ.ಆರ್.ಮಾರುಕಟ್ಟೆ, ವಿಧಾನಸೌಧ, ಗುಟ್ಟಹಳ್ಳಿ, ನಾಗಸಂದ್ರ, ಆರ್.ಆರ್.ನಗರ, ಮೈಸೂರು ರಸ್ತೆ ಸೇರಿ ಹಲವೆಡೆ ನಿನ್ನೆಯಿಂದ ಜಿಟಿ ಜಿಟಿ ಮಳೆಯಾಗಿದೆ. ಕೆಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಜನ ಜೀವನಕ್ಕೆ ಅಡಚಣೆ: ಮುಂಜಾನೆ 5.30ಕ್ಕೆ ಆರಂಭವಾದ ಜಿಟಿ ಜಿಟಿ ಮಳೆ ರಾತ್ರಿವರೆಗೂ ಮುಂದುವರಿಯಿತು. ಸ್ವಲ್ಪ ಹೊತ್ತು ಜೋರಾಗಿ ಮಳೆ ಬಂದರೆ, ಬಿಡುವಿನ ಸಂದರ್ಭದಲ್ಲಿ ಸೋನೆ ಮಳೆಯ ರೀತಿಯಲ್ಲಿ ಹನಿಯುತ್ತಲೇ ಇತ್ತು. ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದ್ದುದರಿಂದ ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಿದ್ದವರು ಅನಿವಾರ್ಯವಾಗಿ ಆಟೋಗಳನ್ನು ಅವಲಂಬಿಸಬೇಕಾಯಿತು.
ಹೊರಗೆ ಬಂದ ಛತ್ರಿ ಜಾಕೆಟ್: ಮಳೆಗಾಲ ಮುಗಿದು, ಚಳಿಗಾಲ ಆರಂಭವಾಗಿದ್ದರಿಂದ ಎಲ್ಲರೂ ಬೆಚ್ಚಗಿನ ಉಡುಪುಗಳನ್ನು ಧರಿಸುತ್ತಿದ್ದರು. ಆದರೆ, ದಿಢೀರನೆ ಮಳೆಯಾಗಿದ್ದರಿಂದ ಮೂಲೆ ಸೇರಿದ್ದ ಛತ್ರಿಗಳು ಹಾಗೂ ಮಳೆಯ ಜಾಕೆಟ್‌ಗಳನ್ನು ಹೊರಕ್ಕೆ ತೆಗೆಯುವಂತಾಗಿತ್ತು.
ನಗರದಲ್ಲಿ ಒಟ್ಟಾರೆ 2 ಮಿ.ಮೀ ನಷ್ಟು ತುಂತುರು ಮಳೆಯಾಗಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮುಂದಿನ 48 ಗಂಟೆಗಳಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.







