ಕಾರು ಚಾಲಕರ ವಂಚಿಸಿ ಸುಲಿಗೆ: ಆರೋಪಿಗಳ ಬಂಧನ

ಮಂಡ್ಯ, ಡಿ.1: ಶ್ರೀರಂಗಪಟ್ಟಣ ಬಳಿ ಹೆದ್ದಾರಿಯಲ್ಲಿ ಒಂಟಿ ಕಾರು ಚಾಲಕರನ್ನು ವಂಚಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಪೊಲೀಸರ ತಂಡ ಬಂಧಿಸಿ, ಸುಲಿಗೆ ಮಾಡಿದ್ದ ಹಣವನ್ನು ವಶಪಡಿಸಿಕೊಂಡಿದೆ.
ಕಾರ್ ಇಂಟೀರಿಯಲ್ ಸರ್ವೀಸ್ ಸ್ಟೇಷನ್‍ನಲ್ಲಿ ಕೆಲಸ ಮಾಡುತ್ತಿದ್ದ ಮೈಸೂರಿನ ಕೆಸರೆ ನಿವಾಸಿ ಮುಹಮ್ಮದ್ ಜಮೀರ್ ಹಾಗೂ ಪ್ಲೈವುಡ್ ಕೆಲಸಗಾರ ಕೆಸರೆ ನಿವಾಸಿ ಜಮೀಲ್ ಖಾನ್ ಬಂಧಿತ ಆರೋಪಿಗಳು.
ಬಂಧಿತರಿಂದ ಸುಲಿಗೆ ಮಾಡಲು ಉಪಯೋಗಿಸಿದ್ದ ಒಂದು ಬುಲೆಟ್ ಬೈಕ್, ಎರಡು ಮೊಬೈಲ್ ಹಾಗೂ ಸುಲಿಗೆ ಮಾಡಿದ್ದ 7 ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಪರಶುರಾಂ ತಿಳಿಸಿದ್ದಾರೆ.
ಆರೋಪಿಗಳು ಹೆದ್ದಾರಿಯಲ್ಲಿ ಓರ್ವರೇ ತೆರಳುತ್ತಿದ್ದ ಕಾರನ್ನು ಬೈಕ್‍ನಲ್ಲಿ ಬೆನ್ನಟ್ಟಿ, ತಮ್ಮ ಬೈಕ್‍ಗೆ ಢಿಕ್ಕಿಮಾಡಿ ಓಡಿ ಹೋಗುತ್ತಿದ್ದೀರಿ. ನಮಗೆ ಪೆಟ್ಟಾಗಿದೆ, ಚಿಕಿತ್ಸೆಗೆ ಹಣ ಕೊಡಬೇಕು. ಇಲ್ಲದಿದ್ದರೆ, ಕಾರನ್ನು ಪುಡಿಪುಡಿ ಮಾಡುತ್ತೇವೆ ಎಂದು ಬೆದರಿಸಿ ಹಣ ಕೀಳುತ್ತಿದ್ದರು ಎನ್ನಲಾಗಿದೆ.
ಕೊಡಗಿನ ಕನ್ಯಾಕುಮಾರಿ ತೋಟದ ಮಾಲಕ ಪಿ.ಎಂ.ಸುರೇಶ ಅವರಿಂದ 4,100 ರೂ. ಹಾಗೂ ಕೊಡಗಿನ ಕುಟ್ಟ ಗ್ರಾಮದ ಮುದ್ದಪ್ಪ ಅವರಿಂದ 30 ಸಾವಿರ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶ್ರಿರಂಗಪಟ್ಟಣ ಡಿವೈಎಸ್ಪಿ ಅರುಣ್ ನಾಗೇಗೌಡರ ನೇತೃತ್ವದ ಸಿಪಿಐ ಕೆ.ವಿ.ಕೃಷ್ಣಪ್ಪ, ಪಿಎಸ್ಸೈಗಳಾದ ಗಿರೀಶ್, ಮುದ್ದು ಮಾದೇವ ಮತ್ತು ಸಿಬ್ಬಂದಿ ನ.30ರಂದು ನಗುವನಹಳ್ಳಿ ಗೇಟ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರು ನಗರ, ಮೈಸೂರು ಜಿಲ್ಲೆ, ಬೆಂಗಳೂರು ನಗರ ಹಾಗೂ ಮಂಡ್ಯ ಜಿಲ್ಲೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ರೀತಿ ಸುಲಿಗೆ ಮಾಡುತ್ತಿದ್ದರೆಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಪರಶುರಾಂ ಹೇಳಿದ್ದಾರೆ.







