ಹಾಂಕಾಂಗ್ ಪ್ರತಿಭಟನಕಾರರ ಮೇಲೆ ಪೊಲೀಸ್ ದೌರ್ಜನ್ಯ: ಡಬ್ಲ್ಯುಎಚ್ಒ ವರಿಷ್ಠೆ
ಆರೋಪಕ್ಕೆ ಚೀನಾ ಆಕ್ರೋಶ

ಜಿನೇವಾ, ಡಿ.1: ಹಾಂಕಾಂಗ್‌ನ ಪ್ರಜಾಪ್ರಭುತ್ವವಾದಿ ಪ್ರತಿಭಟನಕಾರರ ಮೇಲೆ ಪೊಲೀಸ್ ಪಡೆಗಳು ಅತಿರೇಕದ ಬಲಪ್ರಯೋಗ ಮಾಡಿದ್ದಾರೆಂಬ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂಬ ವಿಶ್ವಸಂಸ್ಥೆಯ ಮಾನವಹಕ್ಕುಗಳ ವರಿಷ್ಠೆ ಮಿಶೆಲ್ ಬ್ಯಾಶೆಲೆಟ್ ಅವರ ಬೇಡಿಕೆಗೆ ಚೀನಾ ಸರಕಾರ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಿಶೆಲ್, ಚೀನಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆಂದು ಅದು ಆಪಾದಿಸಿದೆ.
‘‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಗೆ ಮಿಶೆಲ್ ಬ್ಯಾಶೆಲೆಟ್ ಬರೆದಿರುವ ಲೇಖನವು ಲೋಪಭರಿತವಾಗಿದೆ ಹಾಗೂ ವಿಶ್ವಸಂಸ್ಥೆಯ ಸನದುಗಳ ಧ್ಯೇಯಗಳು ಹಾಗೂ ತತ್ವಗಳನ್ನು ಉಲ್ಲಂಘಿಸುತ್ತದೆ’’ ಎಂದು ವಿಶ್ವಸಂಸ್ಥೆಯ ಚೀನಿ ನಿಯೋಗದ ಹೇಳಿಕೆ ತಿಳಿಸಿದೆ.
ಮಿಶೆಲ್ ಅವರ ಲೇಖನದ ವಿರುದ್ಧ ಚೀನಾವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಾರ್ಯಾಲಯದಲ್ಲಿ ತನ್ನ ಪ್ರಬಲವಾದ ಅಹವಾಲುಗಳನ್ನು ಸಲ್ಲಿಸಿದೆ ಎಂದು ಅವರು ಹೇಳಿದರು.
ಹಾಂಕಾಂಗ್‌ನಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಅತಿರೇಕದ ಬಲಪ್ರಯೋಗಿಸಿದ್ದಾರೆಂಬ ವರದಿಗಳ ಬಗ್ಗೆ ಸೂಕ್ತವಾದ ಸ್ವತಂತ್ರ ಹಾಗೂ ಪಕ್ಷಪಾತರಹಿತವಾದ ನ್ಯಾಯಾಂಗ ತನಿಖೆಯಾಗಬೇಕೆಂದು ಬ್ಯಾಶೆಲೆಟ್ ಅವರು ಅಧಿಕಾರಿಗಳನ್ನು ಆಗ್ರಹಿಸಿದ್ದರು.





