ಜಲಮಂಡಳಿಯಿಂದ ನಿರ್ಮಲೀಕರಣ ಕಾರ್ಮಿಕರಿಗೆ ತರಬೇತಿ
ಬೆಂಗಳೂರು, ಡಿ.1: ಮ್ಯಾನ್‌ಹೋಲ್, ಸಂಸ್ಕರಣಾ ಘಟಕಗಳಲ್ಲಿ ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಜಲಮಂಡಳಿ ವತಿಯಿಂದ ಕೆಲಸಗಾರರಿಗೆ 12 ದಿನಗಳ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಾಗಾರದಲ್ಲಿ ಸಫಾಯಿ ಕರ್ಮಚಾರಿ ಆಯೋಗದಲ್ಲಿ ನೋಂದಾಯಿತ 31 ಕಾರ್ಮಿಕರಿಗೆ ತರಗತಿ ಹಾಗೂ ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು. ಇದರಲ್ಲಿ ಮಂಡಳಿಯ ನುರಿತ ಹಿರಿಯ ಅಧಿಕಾರಿಗಳಿಂದ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಿಂದ ಒಳಚರಂಡಿ ನಿರ್ಮಲೀಕರಣಕ್ಕೆ ಯಂತ್ರಗಳ ಬಳಕೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಯಂತ್ರೋಪಕರಣಗಳನ್ನು ಉಪಯೋಗಿಸಿ ಒಳಚರಂಡಿ ಸ್ವಚ್ಛತಾ ವಿಧಾನದ ಬಗ್ಗೆ ತಿಳಿದುಕೊಳ್ಳುವುದು, ಕೆಲಸದ ಅಪಾಯ, ಅಪಘಾತ, ರೋಗಗಳು, ಜಾಗೃತಿ ತರಬೇತಿಯ ಅವಶ್ಯಕತೆ ಹಾಗೂ ಸುರಕ್ಷತಾ ಉಪಕರಣಗಳ ಬಳಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು.
ಒಳಚರಂಡಿ ವ್ಯವಸ್ಥೆಯ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ವೀಕ್ಷಣೆ, ಸ್ವ ಅನುಭವ ಮತ್ತು ಪ್ರಯೋಗಿಕ ಪ್ರಾತ್ಯಕ್ಷತೆ ಹಾಗೂ ಅಪಾರ್ಟ್‌ಮೆಂಟ್ ಹಾಗೂ ಬಹುಮಹಡಿಗಳ ಸಮುಚ್ಛಯ ಕಟ್ಟಡಗಳ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಬಗ್ಗೆ ಕಾರ್ಮಿಕರಿಗೆ ಸುದೀರ್ಘವಾದ ಮಾಹಿತಿ ನೀಡಲಾಯಿತು.
ಮ್ಯಾನ್ಯುಯಲ್ ಸ್ಕಾವೆಂಜರ ಅಧಿನಿಯಮ 2013 ಉದ್ದೇಶ, ನಿರ್ಮಲೀಕರಣಗಾರರ ಹಕ್ಕುಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆಗಳ ಒಳಚರಂಡಿ ಜವಾಬ್ದಾರಿಗಳ ಬಗ್ಗೆ ಅರಿವು, ಭಾರತದಲ್ಲಿ ನಿರ್ಮಲೀಕರಣದ ಸ್ಥಿತಿಗತಿ, ಆಗುತ್ತಿರುವ ಅನಾಹುತಗಳು, ಸಾವು, ನೋವುಗಳ ಅಂಕಿ ಅಂಶಗಳೊಂದಿಗೆ ಸಂಪೂರ್ಣ ವಿವರಗಳನ್ನು ಚರ್ಚಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಜಲಮಂಡಳಿ ಪ್ರಧಾನ ಅಭಿಯಂತರ ಕೆಂಪರಾಮಯ್ಯ, ಮುಖ್ಯ ಅಭಿಯಂತರ ಬಿ.ಸಿ.ಗಂಗಾಧರ್, ಅಪರ ಮುಖ್ಯ ಅಭಿಯಂತರ ಬಿ.ಸುರೇಶ್ ಸೇರಿದಂತೆ ಹಲವರಿದ್ದರು.