ರಾಕ್ಷಸ ಆರ್ಥಿಕತೆ ವಿರುದ್ಧ ರಾಷ್ಟ್ರೀಯ ಆಂದೋಲನ ರೂಪಿಸಬೇಕು: ಮೇಧಾ ಪಾಟ್ಕರ್

ಬೆಂಗಳೂರು, ಡಿ.1: ಸಂಘಟಿತ ಮತ್ತು ಅಸಂಘಟಿತ ವಲಯಗಳಿಗೆ ಮಾರಕ ವಾಗಿರುವ ರಾಕ್ಷಸ ಆರ್ಥಿಕತೆ ವಿರುದ್ಧವಾಗಿ ರಾಷ್ಟ್ರೀಯ ಆಂದೋಲನ ರೂಪಿಸ ಬೇಕಾಗಿದೆ ಎಂದು ನರ್ಮದಾ ಬಚಾವೋ ಚಳವಳಿಯ ನಾಯಕಿ ಮೇಧಾ ಪಾಟ್ಕರ್ ಹೇಳಿದರು.
ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಗ್ರಾಮ ಸೇವಾ ಸಂಘ ಆಯೋಜಿಸಿದ್ದ, ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ಹಾಗೂ ಜಂಟಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನರ್ಮದಾ ಬಚಾವೊ, ರೈತರ ಭೂಮಿ ಉಳಿಸಿ ಹೋರಾಟಗಳ ಜೊತೆಗೆ ಪವಿತ್ರ ಆರ್ಥಿಕತೆಗಾಗಿ ನಡೆಯುತ್ತೀರುವ ಸತ್ಯಾಗ್ರಹವನ್ನು ನಾವು ಬೆಂಬಲಿಸಬೇಕು. ಇದು ಕೇವಲ ನೇಕಾರರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ, ಬದಲಾಗಿ ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳನ್ನು ಪಡೆಯುವುದಾಗಿದೆ ಎಂದರು.
ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಗಳ ಪರಿಣಾಮ, ಅಸಂಘಟಿತ ವಲಯದ ಕಾರ್ಮಿಕರು ಮಾತ್ರವಲ್ಲದೆ, ಸಂಘಟಿತ ಉದ್ಯೋಗಿಗಳಿಗೂ ಉದ್ಯೋಗದ ಭದ್ರತೆ ಇಲ್ಲದಂತೆ ಆಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ, ಹೋರಾಟ ರೂಪಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಸರಕಾರಗಳು ಸ್ವಯಂಚಾಲಿತ ಮತ್ತು ಆಟೊಮೆಷನ್ ಪ್ರಮಾಣ ಕಡಿಮೆಗೊಳಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಸಬೇಕು ಎಂದು ತಿಳಿಸಿದರು.
ರಂಗಕರ್ಮಿ ಪ್ರಸನ್ನ ಮಾತನಾಡಿ, ಸತ್ಯಾಗ್ರಹ ಫಲಶೃತಿಯಾಗಿ ಕೇಂದ್ರ ಸರಕಾರ ಗ್ರಾಮ ಸೇವಾ ಸಂಘವನ್ನು ಮಾತುಕತೆಗೆ ಆಹ್ವಾನಿಸಿದೆ. ಇದೊಂದು ಆರಂಭ ಮಾತ್ರ, ದಾರಿ ದೂರವಿದೆ. ಆದರೆ, ಬೇಡಿಕೆಗಳು ಈಡೇರಿದಾಗ ಮಾತ್ರ ಮಧ್ಯಮ ಹಾಗೂ ಸಣ್ಣಗಾತ್ರದ ಕೈಗಾರಿಕೆಗಳು, ರೈತರು ಹಾಗೂ ಕುಶಲಕರ್ಮಿಗಳು ಬದುಕು ಹನನವಾಗಲಿದೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ, ವರಲಕ್ಷ್ಮೀ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
.jpg)







