ಜಾಗತಿಕ ತಾಪಮಾನದಿಂದ ಅಪಾಯ ಕಟ್ಟಿಟ್ಟ ಬುತ್ತಿ: ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ
ಬೆಂಗಳೂರು, ಡಿ.1: ಅರವತ್ತೈದು ಸಾವಿರ ವರ್ಷಗಳಿಗಿಂತಲೂ ಕಳೆದ 10 ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಾಗಿದ್ದು, ಈ ತಾಪಮಾನವನ್ನು ತಡೆಗಟ್ಟಲು ದಿಟ್ಟ ಬಾಲೆ ಗ್ರೇತಾ ಥನ್ ಬರ್ಗ್‌ಳಂತೆ ನಾವೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹಿರಿಯ ಪತ್ರಕರ್ತ, ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಹೇಳಿದ್ದಾರೆ.
ರವಿವಾರ ನಗರದ ಗ್ರೀನ್ ಪಾಥ್ ಸಭಾಂಗಣದಲ್ಲಿ ಭೂಮಿ ಬುಕ್ಸ್ ಆಯೋಜಿಸಿದ್ದ ಗ್ರೇತಾ ಥನ್ ಬರ್ಗ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಪಮಾನ ಏರಿಕೆಯಿಂದಾಗಿ ಕೆರೆ, ನದಿಗಳು ಭತ್ತುತ್ತಿವೆ. ಅರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಂಡು ಅರಣ್ಯ ನಾಶವಾಗುತ್ತಿವೆ. ಅತಿವೃಷ್ಠಿ, ಅನಾವೃಷ್ಠಿ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಈಗಿನಿಂದಲೇ ಗಿಡ ಮರಗಳನ್ನು ಬೆಳೆಸಬೇಕು. ಕೆರೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಇಲ್ಲದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಈಗಾಗಲೇ ತಾಪಮಾನದ ಬಗ್ಗೆ ಎಚ್ಚರಿಕೆ ವಹಿಸಿರುವ ಶ್ರೀಮಂತ ದೇಶಗಳು ಮುಂದೊಂದು ದಿನ ಸಮುದ್ರದ ಸುನಾಮಿಗಳು ಅಪ್ಪಳಿಸಿದರೆ ಅದರಿಂದ ಪಾರಾಗಲು ಏನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸುತ್ತಿವೆ. ನಾವೂ ಸರಳ ಜೀವನವನ್ನು ನಡೆಸುವ ಮೂಲಕವೇ ಪರಿಸರ ಜಾಗೃತಿ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಜನರಲ್ಲಿ ಪರಿಸರ ಕುರಿತ ಕಾರ್ಯಾಗಾರಗಳನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಮೂಕ ಪೃಥ್ವಿಗೆ ಮಾತು ಕೊಟ್ಟ ಸ್ವೀಡನ್‌ನ ಗ್ರೇತಾ ಥನ್ ಬರ್ಗ್ ಅವರು ಹವಾಮಾನ ವೈಪರೀತ್ಯದ ವಿರುದ್ಧ ಕೋಟ್ಯಂತರ ಯುವಜನರನ್ನು ಹೋರಾಟಕ್ಕೆ ಅಣಿಗೊಳಿಸಿದ್ದಾರೆ. ಅಲ್ಲದೆ, ಡಿ.2ರಂದು ಮಾಡ್ರಿಡ್ ನಗರದಲ್ಲಿ ಆರಂಭವಾಗುತ್ತಿರುವ 25ನೆ ವಿಶ್ವ ಪರಿಸರ ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಚಿಂತಕ ಡಾ.ಸಂಜೀವ್ ಕುಲಕರ್ಣಿ ಮಾತನಾಡಿ, ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಅವರು ಬರೆದಿರುವ ಗ್ರೇತಾ ಥನ್ ಬರ್ಗ್ ಕುರಿತ ಪುಸ್ತಕವನ್ನು ಶಾಲೆ, ಕಾಲೇಜುಗಳ ಗ್ರಂಥಾಲಯಗಳಲ್ಲಿ ಇಡಬೇಕು. ಯುವಪೀಳಿಗೆ ಹಾಗೂ ಹಿರಿಯರು ಈ ಪುಸ್ತಕವನ್ನು ಓದುವ ಕೆಲಸ ಮಾಡಬೇಕೆಂದು ತಿಳಿಸಿದರು. ವಿಶ್ವದ 11 ಸಾವಿರ ವಿಜ್ಞಾನಿಗಳು ಈಗಾಗಲೇ ತಾಪಮಾನ ಏರಿಕೆ ಬಗ್ಗೆ ಮಾತನಾಡಿದ್ದು, ಈ ಭೂಮಿಗೆ ಸಣ್ಣದೊಂದು ಜ್ವರ ಬಂದಿದ್ದು, 2026ರ ಹೊತ್ತಿಗೆ ಮನುಷ್ಯ ನಿರ್ನಾಮವಾಗಿ ಹೋಗುತ್ತಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ರೂಪಾ ಹಾಸನ, ಶಿಕ್ಷಕ ಸಂತೋಷ ಗುಡ್ಡಿಯಂಗಡಿ, ಬೆಂಗಳೂರಿನ ಶಾಂತಿಧಾನ ಹೈಸ್ಕೂಲ್ ಹುಡಗಿ ಪ್ರೀಯಾಂಕಾ ಉಪಸ್ಥಿತರಿದ್ದರು.







