ಅಂಶದಾಯಿ ಪಿಂಚಣಿ ಯೋಜನೆ ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯವಾಗಲ್ಲ: ಹೈಕೋರ್ಟ್

ಬೆಂಗಳೂರು, ಡಿ.1: 2006ರ ಎ.1ರಿಂದ ಸೇವೆಗೆ ಸೇರಿದ ರಾಜ್ಯ ಸರಕಾರಿ ನೌಕರರಿಗೆ ಪರಿಚಯಿಸಲಾದ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆ(ಎನ್‌ಡಿಸಿಪಿಎಸ್) ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಕುರಿತು ವಿಜಯಕುಮಾರ್ ಹಾಗೂ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ ಸಲ್ಲಿಸಿದ್ದ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಜ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ಪೂರ್ಣಗೊಂಡು, ಕಾಯ್ದಿರಿಸಿದ್ದ ತೀರ್ಪು ಪ್ರಕಟಗೊಂಡಿದೆ.
ಕರ್ನಾಟಕ ನಾಗರಿಕ ಸೇವೆಗಳ ಕಾಯ್ದೆ-1978ರ ಪ್ರಕಾರ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆ(ಎನ್‌ಡಿಸಿಪಿಎಸ್) ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ. ಹಾಗೊಂದು ಬಾರಿ ನ್ಯಾಯಾಂಗ ಅಧಿಕಾರಿಗಳು ಪಿಂಚಣಿ ಯೋಜನೆಗೆ ಸೇರಬಯಸಲು ಇಚ್ಛಿಸಿದರೆ ಎನ್‌ಡಿಸಿಪಿಎಸ್ ಗೆ ಮನವಿ ಪತ್ರ ಸಲ್ಲಿಸಲು ಸೂಚನೆ ನೀಡಿದೆ. ಅಲ್ಲದೆ, 2006ರ ಎ.1ರಿಂದ ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳನ್ನು ಎಸ್‌ಡಿಸಿಪಿಎಸ್ ಯೋಜನೆಗೆ ಸೇರಿಸಿಕೊಳ್ಳುವ ಬಗ್ಗೆ ಜ.31ರಂದು ಮಾಹಿತಿ ನೀಡಬೇಕು ಎಂದು ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.







