ಮಲೆನಾಡಿನಲ್ಲಿ ಧಿಡೀರ್ ಮಳೆ: ಬೆಳೆ ಸಂರಕ್ಷಣೆಗೆ ಪರದಾಡುತ್ತಿರುವ ಕೃಷಿಕರು

ಚಿಕ್ಕಮಗಳೂರು, ಡಿ.1: ಜಿಲ್ಲಾದ್ಯಂತ ಕಳೆದ ಎರಡು ತಿಂಗಳಿನಿಂದ ಸಂಪೂರ್ಣವಾಗಿ ಬಿಡುವು ನೀಡಿದ್ದ ಮಳೆ ರವಿವಾರ ಮಲೆನಾಡಿನ ಕೆಲ ಭಾಗಗಳಲ್ಲಿ ಧಾರಾಕಾರವಾಗಿ ಸುರಿದಿದ್ದರೆ, ಜಿಲ್ಲೆಯ ಬಯಲುಸೀಮೆ ತಾಲೂಕುಗಳ ವ್ಯಾಪ್ತಿಯಲ್ಲಿ ದಟ್ಟ ಮೋಡ ಅವರಿಸಿ ಕೆಲ ಹೊತ್ತು ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ. ದಿಢೀರ್ ಸುರಿದ ಮಳೆಯಿಂದಾಗಿ ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಜಿಲ್ಲಾದ್ಯಂತ ಭಾರೀ ಅನಾಹುತಗಳನ್ನು ಸೃಷ್ಟಿಸಿದ್ದ ಮಳೆ ನಂತರ ಆಗ್ಗಾಗ್ಗೆ ಸುರಿದು ಮಾಯಾವಾಗಿತ್ತು. ಮಳೆಯಿಂದ ಸಂಭವಿಸಿದ ಅನಾಹುತಗಳಿಂದಾಗಿ ಸಾವಿರಾರು ಜನರು ನಿರಾಶ್ರಿತರಾಗಿದ್ದರು. ಎರಡು ತಿಂಗಳಿನಿಂದ ಮಳೆ ಸಂಪೂರ್ಣವಾಗಿ ಬಿಡುವು ನೀಡಿದ್ದರಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಆದರೆ ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಇದರಿಂದಾಗಿ ಮಲೆನಾಡಿನ ಕಾಫಿ, ಅಡಿಕೆ ಬೆಳೆಗಾರರು ಮಳೆಯ ಭೀತಿಯಲ್ಲಿದ್ದು, ರವಿವಾರ ಬೆಳಗ್ಗೆ ಹಾಗೂ ಸಂಜೆ ಧಾರಾಕಾರ ಮಳೆ ಸುರಿದ ಪರಿಣಾಮ ಮಲೆನಾಡಿನ ಕಾಫಿ, ಅಡಿಕೆ ಬೆಳೆಗಾರರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.
ರವಿವಾರ ಬೆಳಗ್ಗೆಯಿಂದಲೇ ಜಿಲ್ಲೆಯಾದ್ಯಂತ ದಟ್ಟ ಮೋಡಕವಿದ ವಾತಾವರಣ ನಿರ್ಮಾಣವಾಗಿ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಬೆಳಗ್ಗೆ ಸುಮಾರು 10ರ ಸಮಯದಲ್ಲಿ ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ದಿಢೀರನೆ ಮಳೆ ಸುರಿಯಿತು. ಆದರೆ ಚಿಕ್ಕಮಗಳೂರು, ಕಡೂರು, ತರಿಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರ ಮೋಡಕವಿದ ವಾತಾವರಣ ಇದ್ದರೂ ಆಗಾಗ್ಗೆ ತುಂತುರು ಮಳೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಸುಮಾರು ಅರ್ಧ ಗಂಟೆ ಸಾಧಾರಣ ಮಳೆ ಸುರಿದಿದ್ದು, ಸಂಜೆವರೆಗೂ ಮೋಡ ಕವಿದ ವಾತಾವರಣ ಮಾತ್ರ ಇತ್ತು.
ರವಿವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಸುರಿದ ಧಾರಾಕಾರ ಮಳೆ ಈ ಭಾಗದ ಅಡಿಕೆ, ಕಾಫಿ ಬೆಳೆಗಾರರನ್ನು ಕಂಗಾಲು ಮಾಡಿದೆ. ಪ್ರಸಕ್ತ ಮಲೆನಾಡಿನಲ್ಲಿ ಕಾಫಿ, ಅಡಿಕೆ ಕಟಾವು ಕೃಷಿ ಕೆಲಸ ನಡೆಯುತ್ತಿದ್ದು, ಕಟಾವು ಮಾಡಿದ ಅಡಿಕೆ ಹಾಗೂ ಕಾಫಿ ಬೆಳೆಯ ಸಂಸ್ಕರಣೆಗೆ ಮಳೆ ಅಡ್ಡಿಯಾಗಿದೆ. ಕಳೆದೊಂದು ವಾರದಿಂದ ಮಲೆನಾಡಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿರುವುದರಿಂದ ಅಡಿಕೆ ಒಣಗಿಸುವ, ಸಂಸ್ಕರಣೆ ಮಾಡುವ ಪ್ರಕ್ರಿಯೆಗೆ ಭಾರೀ ಹಿನ್ನಡೆಯಾಗಿದೆ.
ಮಲೆನಾಡಿನಲ್ಲಿ ಅಡಿಕೆ ಬೇಯಿಸಿ ಸಂಸ್ಕರಣೆ ಮಾಡುವ ಪದ್ಧತಿ ಇದ್ದು, ಇದೀಗ ಭಾರೀ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರು ಅಡಿಕೆ ಕಟಾವು ಮಾಡಿ ಸಂಸ್ಕರಣೆ ಮಾಡುತ್ತಿದ್ದಾರೆ. ಅಡಿಕೆ ಸಂಸ್ಕರಣೆಗೆ ಬಿಸಿಲು ಅತ್ಯಗತ್ಯವಾಗಿದ್ದು, ಕಳೆದೊಂದು ವಾರದಿಂದ ಮಲೆನಾಡಿನಲ್ಲಿ ಬಿಸಿಲು ಮಾಯವಾಗಿರುವುದರಿಂದ ಬೇಯಿಸಿದ ಅಡಿಕೆಯನ್ನು ಒಣಗಿಸಲು ಸಾಧ್ಯವಾಗದೆ ಅಡಿಕೆ ಕೊಳೆಯಲಾರಂಭಿಸಿದೆ. ರವಿವಾರ ಧಾರಾಕಾರ ಮಳೆಯಾದ ಪರಿಣಾಮ ಕಟಾವು ಮಾಡಿದ ಹಾಗೂ ಬೇಯಿಸಿದ ಅಡಿಕೆ ಬೆಳೆ ಸಂಪೂರ್ಣವಾಗಿ ನಾಶವಾಗುವ ಭೀತಿ ಅಡಿಕೆ ಬೆಳೆಗಾರರನ್ನು ಆವರಿಸಿಕೊಂಡಿದೆ.
ಕಾಫಿ ಬೆಳೆಗಾರರ ಪರಸ್ಥಿತಿಯೂ ಇದೇ ಆಗಿದ್ದು, ಇದೀಗ ಅರೇಬಿಕಾ ಕಾಫಿ ಕಟಾವು ನಡೆಯುತ್ತಿದೆ. ಆದರೆ ಮೋಡ ಹಾಗೂ ಮಳೆಯಿಂದಾಗಿ ಕಾಫಿ ಒಣಗಿಸಲು ಬಿಸಿಲು ಇಲ್ಲದೆ ಕಾಫಿ ಬೆಳೆಯೂ ನಾಶವಾಗುವ ಹಾಗೂ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಅಕಾಲಿಕವಾಗಿ ಹೂ ಕಟ್ಟುವ ಆತಂಕ ಕಾಫಿ ಬೆಳೆಗಾರರನ್ನು ಕಾಡುತ್ತಿದೆ. ಇನ್ನು ಭತ್ತ ಬೆಳೆದಿರುವ ರೈತರೂ ಅಕಾಲಿಕ ಮಳೆಗೆ ಆತಂಕಗೊಂಡಿದ್ದು, ಕಟಾವಿಗೆ ಬಂದಿರುವ ಭತ್ತದ ಪೈರುಗಳು ಮಳೆಗೆ ಸಿಕ್ಕಿ ಭತ್ತ ಉದುರುವ, ಬೀಜ ಮೊಳಕೆ ಒಡೆಯುವ ಹಾಗೂ ಪೈರುಗಳು ವಿವಿಧ ರೋಗಳಿಗೆ ತುತ್ತಾಗುವ ಭೀತಿಯಿಂದ ನಲುಗಿ ಹೋಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಲೆನಾಡು ನಿರಂತರವಾಗಿ ಅತಿವೃಷ್ಟಿಗೆ ತುತ್ತಾಗಿದೆ. ಭಾರೀ ಮಳೆಯಿಂದಾಗಿ ಕಾಫಿ, ಅಡಿಕೆ, ಕಾಳು ಮೆಣಸು ಹಾಗೂ ಭತ್ತದ ಗದ್ದೆಗಳು ವಿವಿದ ಕೊಳೆ ರೋಗಗಳಿಗೆ ತುತ್ತಾಗಿವೆ. ಅತಿವೃಷ್ಟಿಯಿಂದಾಗಿ ಸತತ ಬೆಳೆ ನಷ್ಟ ಅನುಭವಿಸಿ ಆದಾಯವನ್ನು ಕಳೆದುಕೊಂಡಿರುವ ರೈತರು, ಬೆಳೆಗಾರರು ಅಳಿದುಳಿದ ಬೆಳೆ ರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದಿರುವುದು ಒಂದೆಡೆಯಾದರೆ ಉಳಿದಿರುವ ಬೆಳೆಗಳನ್ನು ರಕ್ಷಣೆ ಮಾಡಲು, ಕೊಯ್ಲು, ಕಟಾವು, ಸಂಸ್ಕರಣೆ ಮಾಡಲು ಪ್ರತಿಕೂಲ ಹವಾಮಾನ, ಅಕಾಲಿಕ ಮಳೆ ಅಡ್ಡಗಾಲು ಹಾಕಿರುವುದು ಮಲೆನಾಡಿನ ರೈತರ ಬದುಕನ್ನು ಹೈರಾಣಾಗಿಸಿದೆ.







