ಕ್ಯಾಲಿಫೋರ್ನಿಯಾ: ಕನ್ನಡಿಗ ವಿದ್ಯಾರ್ಥಿಯನ್ನು ಗುಂಡಿಟ್ಟುಕೊಂದ ಅರೋಪಿ ಶರಣಾಗತಿ

ವಾಶಿಂಗ್ಟನ್, ಡಿ.2: ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಕನ್ನಡಿಗ ವಿದ್ಯಾರ್ಥಿ ಅಭಿಷೇಕ್ ಸುದೇಶ್ ಭಟ್‌ರನ್ನು ಇತ್ತೀಚೆಗೆ ಗುಂಡಿಟ್ಟು ಸಾಯಿಸಿದ್ದ ಆರೋಪಿಯನ್ನು ಸ್ಯಾನ್ ಬರ್ನಾರ್ಡಿನೊದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಎರಿಕ್ ಟರ್ನರ್ ಎಂದು ಗುರುತಿಸಲಾಗಿದ್ದು, ಅಮೆರಿಕದ ಪ್ರಜೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
42ರ ವಯಸ್ಸಿನ ಎರಿಕ್ ಟರ್ನರ್ ಶನಿವಾರ ಶರಣಾಗತನಾಗಿದ್ದಾನೆ. ಜಾಮೀನುರಹಿತವಾಗಿ ಬಂಧನದಲ್ಲಿರುವ ಟರ್ನರ್‌ರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸ್ಯಾನ್ ಬರ್ನಾರ್ಡಿನೊ ಪೊಲೀಸ್ ಇಲಾಖೆ ತಿಳಿಸಿದೆ.
ಕರ್ನಾಟಕದ ಮೈಸೂರು ನಿವಾಸಿ 25ರ ಹರೆಯದ ಅಭಿಷೇಕ್ ಹೊಟೇಲ್‌ನ ಹೊರಗಡೆ ಗುಂಡೇಟಿಗೆ ಬಲಿಯಾಗಿದ್ದರು. ಅಭಿಷೇಕ್ ಹೊಟೇಲ್‌ನಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡಿಕೊಂಡು ತನ್ನ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು.
ಅಭಿಷೇಕ್ ಸ್ಯಾನ್ ಬರ್ನಾರ್ಡಿನೊದಲ್ಲಿರುವ ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿವರ್ಸಿಟಿ ಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ ಡಿಗ್ರಿ ಅಭ್ಯಸಿಸುತ್ತಿದ್ದರು. ಅಭಿಷೇಕ್‌ರನ್ನು ಗುರುವಾರ ಮಧ್ಯಾಹ್ನ ಹೊಟೇಲ್‌ನ ಹೊರಗಡೆ ಎರಿಕ್ ಟರ್ನರ್ ಎಂಬಾತ ಗುಂಡಿಟ್ಟು ಸಾಯಿಸಿದ್ದ. ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಭಿಷೇಕ್‌ಗೆ ಟರ್ನರ್ ಏಕೆ ಗುಂಡು ಹಾರಿಸಿದ್ದಾನೆ.ಹತ್ಯೆಯ ಹಿಂದಿನ ಕಾರಣ ಏನೆಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಸ್ಯಾನ್ ಬರ್ನಾರ್ಡಿನೊ ಪೊಲೀಸ್ ಇಲಾಖೆ ತಿಳಿಸಿದೆ.







