ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ ಕೊಲ್ಲಬೇಕು: ಸಂಸತ್ ನಲ್ಲಿ ಜಯಾ ಬಚ್ಚನ್
ಹೊಸದಿಲ್ಲಿ : ಹೈದರಾಬಾದ್ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣ ಇಂದು ಸಂಸತ್ತಿನ ಎರಡೂ ಸದನಗಳಲ್ಲಿ ಪ್ರತಿಧ್ವನಿಸಿದಾಗ ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದ ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷ ನಾಯಕಿ ಜಯಾ ಬಚ್ಚನ್ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ ಕೊಲ್ಲಬೇಕು ಎಂದು ಹೇಳಿದರು.
"ಸರಕಾರ ಸ್ಪಷ್ಟ ಉತ್ತರ ನೀಡಬೇಕೆಂದು ಜನರು ಬಯಸುತ್ತಿದ್ದಾರೆ. ಏನಾಗಿದೆ ? ಸಂತ್ರಸ್ತೆಯ ಕುಟುಂಬಕ್ಕೆ ಹೇಗೆ ನ್ಯಾಯವೊದಗಿಸಲಾಗುವುದು ?'' ಎಂದು ಜಯಾ ಬಚ್ಚನ್ ಪ್ರಶ್ನಿಸಿದರು.
``ಪಶುವೈದ್ಯೆ ಅತ್ಯಚಾರ ಪ್ರಕರಣ ಬೆಳಕಿಗೆ ಬರುವ ಒಂದು ದಿನ ಮುನ್ನ ಹೈದರಾಬಾದ್ನಲ್ಲಿ ಇಂತಹುದೇ ಇನ್ನೊಂದು ಘಟನೆ ನಡೆದಿದೆ. ಈ ನಿರ್ದಿಷ್ಟ ಪ್ರದೇಶದಲ್ಲಿ ಯಾವುದೇ ಭದ್ರತೆ ಒದಗಿಸದೇ ಇರುವ ಕುರಿತಂತೆ ಸಂಬಂಧಿತರನ್ನು ಪ್ರಶ್ನಿಸಬೇಡವೇ?'' ಎಂದು ಕೇಳಿದ ಜಯಾ ಬಚ್ಚನ್ ``ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದವರು ನಾಚಿಕೆ ಪಟ್ಟುಕೊಳ್ಳುವಂತೆ ಎಲ್ಲರೆದುರು ನಿಲ್ಲಿಸಬೇಕು, ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಿ ಕೊಲ್ಲಬೇಕು'' ಎಂದು ಹೇಳಿದರು.