ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ಭದ್ರತೆಯ ಉಲ್ಲಂಘನೆ: ರಾಬರ್ಟ್ ವಾದ್ರಾ ಪ್ರತಿಕ್ರಿಯಿಸಿದ್ದು ಹೀಗೆ...
ಹೊಸದಿಲ್ಲಿ, ಡಿ.3: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಿವಾಸದಲ್ಲಿ ಭದ್ರತೆಯ ಉಲ್ಲಂಘನೆಯಾಗಿತ್ತು ಎಂಬ ವರದಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ, ದೇಶದ ನಾಗರಿಕರು ಅದರಲ್ಲೂ ಮುಖ್ಯವಾಗಿ ಮಹಿಳೆಯರ ರಕ್ಷಣೆ ನೀಡುವಲ್ಲಿನ ವೈಫಲ್ಯಕ್ಕೆ ಸರಕಾರವನ್ನೇ ಹೊಣೆಯಾಗಿಸಬೇಕಾಗಿದೆ ಎಂದು ಹೇಳಿದ್ದಾರೆ.
ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಮಂಗಳವಾರ ಬೆಳಗ್ಗೆ ಈ ಕುರಿತು ಬರೆದಿರುವ ವಾದ್ರಾ, ದೇಶದ ಸುರಕ್ಷತೆಯ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ದೇಶದ ಉದ್ದಗಲಕ್ಕೂ ಸುರಕ್ಷತೆಯ ಬಗ್ಗೆ ರಾಜಿ ಮಾಡಕೊಳ್ಳಲಾಗಿದೆ...ಬಾಲಕಿಯರ ಮೇಲೆ ಕಿರುಕುಳ ಹಾಗೂ ಅತ್ಯಾಚಾರ ಹೆಚ್ಚಾಗುತ್ತಿದೆ. ಎಂತಹ ಸಮಾಜವನ್ನು ನಾವು ಸೃಷ್ಟಿಸಿದ್ದೇವೆ..ಪ್ರತಿ ನಾಗರಿಕರಿಗೆ ಸುರಕ್ಷತೆ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ದಿಲ್ಲಿ ನಿವಾಸಕ್ಕೆ ನ.26ರಂದು ಕಾರಿನಲ್ಲಿ ಬಂದಿದ್ದ ಏಳು ಜನರಿದ್ದ ಗುಂಪು ಒಮ್ಮಲೇ ಪ್ರಿಯಾಂಕಾ ಅವರ ಮನೆಯೊಳಗೆ ನುಗ್ಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿತ್ತು. ಪ್ರಿಯಾಂಕಾ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದಿರುವ ಕೆಲವೇ ದಿನಗಳ ಬಳಿಕ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಾದ್ರಾ ಫೇಸ್ಬುಕ್ನಲ್ಲಿ ದೇಶದ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
1991ರಲ್ಲಿ ಎಲ್ಟಿಟಿಎ ಉಗ್ರರಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ಬಳಿಕ ಕಳೆದ 28 ವರ್ಷಗಳಿಂದ ಗಾಂಧಿ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ನೀಡಲಾಗುತ್ತಿದೆ. ವಿವಿಐಪಿ ಭದ್ರತೆಯ ಪಟ್ಟಿಯಲ್ಲಿ ಸೇರಿಸಲಾಗಿತ್ತು.ಆದರೆ ಕಳೆದ ತಿಂಗಳು ಕೇಂದ್ರ ಸರಕಾರ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದಿದ್ದು ಸಿಆರ್ಪಿಎಫ್ನಿಂದ ಝೆಡ್ ಪ್ಲಸ್ ಭದ್ರತೆ ನೀಡಲಾಗುತ್ತಿದೆ.