ಪಶುವೈದ್ಯೆ ಅತ್ಯಾಚಾರ, ಕೊಲೆ ವಿರೋಧಿಸಿ ಪಶುವೈದ್ಯಾಧಿಕಾರಿಗಳಿಂದ ಮೌನ ಮೆರವಣಿಗೆ

ಉಡುಪಿ, ಡಿ.3: ತೆಲಂಗಾಣದ ಪಶುವೈದ್ಯೆ ಡಾ.ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸು ವಂತೆ ಆಗ್ರಹಿಸಿ ಕರ್ನಾಟಕ ಪಶುವೈದ್ಯಕೀಯ ಸಂಘ ಉಡುಪಿ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ವೌನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಜಿಲ್ಲೆಯ ಪಶುಪಾಲನಾ ಇಲಾಖೆಯ ಪಶು ವೈದ್ಯಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿಕೊಂಡು ಮಣಿಪಾಲದ ಉಪೇಂದ್ರ ಪೈ ಸ್ಮಾರಕ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವೌನ ಮೆರವಣಿಗೆ ನಡೆಸಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ತೆಲಂಗಾಣ ಮುಖ್ಯಮಂತ್ರಿಗೆ ಸಲ್ಲಿಸ ಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮನವಿ ಸ್ವೀಕರಿಸಿದರು.
ಪಶುವೈದ್ಯೆಯನ್ನು ಅತ್ಯಾಚಾರ ಎಸಗಿ ಅಮಾನುಷ ರೀತಿಯಲ್ಲಿ ಹತ್ಯೆಗೈದಿರು ವುದು ತೀವ್ರ ಖಂಡನೀಯ. ಈ ಪ್ರಕರಣದ ಬಗ್ಗೆ ಶೀಘ್ರ ತನಿಖೆ ನಡೆಸಿ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು. ಅಲ್ಲದೆ ಪಶುವೈದ್ಯಾಧಿಕಾರಿಗಳಿಗೆ ಸೂಕ್ತ ಭದ್ರತೆಯನ್ನು ಸರಕಾರ ಒದಗಿಸಬೇಕು ಎಂದು ಸಂಘ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಪಶುಪಾಲನ ಇಲಾಖೆಯ ಪ್ರಭಾರ ಉಪನಿರ್ದೇಶಕ ಡಾ.ದಯಾನಂದ ಪೈ, ನಿವೃತ್ತ ಉಪನಿರ್ದೇಶಕ ಡಾ.ಸರ್ವೋತ್ತಮ ಉಡುಪ, ಸಂಘದ ಜಿಲ್ಲಾಧ್ಯಕ್ಷ ಡಾ.ಬಾಬಣ್ಣ ಪೂಜಾರಿ, ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಡಾ.ಪ್ರದೀಪ್ ಕುಮಾರ್ ಎನ್.ಕೆ., ಕೋಶಾಧಿಕಾರಿ ಡಾ. ಮಂಜುನಾಥ್ ಅಡಿಗ, ಡಾ.ಸಂತೋಷ್ ಕುಮಾರ್, ಡಾ.ವಗೀಶ್ ಚವನ್, ಡಾ.ಗೋಪಾಲಕೃಷ್ಣ ಭಟ್, ಡಾ.ಸೂರ್ಯನಾರಾಯಣ್, ಡಾ.ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.