ಮಂಗಳೂರು: ಕಳವು ಮಾಲು ಸ್ವೀಕರಿಸಿದ ಆರೋಪಿಗೆ ಐದೂವರೆ ವರ್ಷ ಜೈಲು
ಪುನರಾವರ್ತನೆ ಅಪರಾಧಕ್ಕೆ ಹೆಚ್ಚುವರಿ ಜೈಲು ಶಿಕ್ಷೆ
ಮಂಗಳೂರು, ಡಿ. 3: ಕಳವು ಮಾಲು ಸ್ವೀಕಾರ ಪ್ರಕರಣದ ಆರೋಪಿಗೆ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ 2,000 ರೂ. ದಂಡ ವಿಧಿಸಿದೆ. ಜತೆಗೆ, ಪುನರಾವರ್ತನೆ ಅಪರಾಧಕ್ಕೆ ಹೆಚ್ಚುವರಿಯಾಗಿ ಮೂರುವರೆ ವರ್ಷ ಸಜೆ ವಿಧಿಸಿದ್ದು, ಆರೋಪಿ ಒಟ್ಟು ಐದೂವರೆ ವರ್ಷ ಕಾರಾಗೃಹ ವಾಸ ಅನುಭವಿಸಬೇಕಾಗಿದೆ.
ಮಧ್ಯಪ್ರದೇಶದ ಆಲಿಯಾಪುರ ಜಿಲ್ಲೆಯ ಜೋಬರ್ಟ್ ನಿವಾಸಿ ವಿಜಯ ಸೋನಿ ಯಾನೆ ಮುನ್ನಾ (60) ಶಿಕ್ಷೆಗೊಳಗಾದ ಆರೋಪಿ.
ಪ್ರಕರಣದಲ್ಲಿ ಕಳವು ಮಾಡಿರುವ ಆರೋಪವನ್ನು ಎದುರಿಸುತ್ತಿರುವ ಆರು ಮಂದಿ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ತಲೆಮರೆಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯ ಬೆಳ್ಳಿ ಅಭರಣಗಳ ಅಂಗಡಿಯೊಂದರಿಂದ 2012ರಲ್ಲಿ ಆರೋಪಿಗಳು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿ ವಿಜಯ ಸೋನಿಗೆ ಮಾರಾಟ ಮಾಡಿದ್ದರು.
ಪ್ರಕರಣ ಹಿನ್ನೆಲೆ: ಮಧ್ಯಪ್ರದೇಶದ ನಿವಾಸಿಗಳಾದ ಮಡಿಯಾ ಭುರಿಯಾ (48), ಬಿಷಾನ್ ಬಿಲಾಲ (46), ಮೋಹನ್‌ಸಿಂಗ್ ಯಾನೆ ಮುನ್ನಾ (38), ಅಮರ್‌ಸಿಂಗ್ ಯಾನೆ ಅಮ್ಜಾತ್ ( 33), ಸರ್ದಾರ್ (20) ಹಾಗೂ ಮದನ್ (40) 2012ರ ಸೆ.25 ರಂದು ಪುಂಜಾಲಕಟ್ಟೆಯ ಬೆಳ್ಳಿ ಆಭರಣಗಳ ಅಂಗಡಿಯ ಬಾಗಿಲು ಮುರಿದು ಬೆಳ್ಳಿಯ ಕಾಲುದೀಪ, ಹರಿವಾಣ, ತಂಬಿಗೆ ಸೇರಿದಂತೆ ಸುಮಾರು 1.50 ಲಕ್ಷ ರೂ. ಮೌಲ್ಯದ 2.5 ಕಿಲೋ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದರು. ಬಳಿಕ ಊರಿಗೆ ತೆರಳಿ ಅಲ್ಲಿ ವಿಜಯ ಸೋನಿಗೆ ಮಾರಾಟ ಮಾಡಿದ್ದರು.
ಕಳವು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಕಳವು ಮಾಡಿದ ವಸ್ತುಗಳನ್ನು ಖರೀದಿಸಿದ ವಿಜಯ ಸೋನಿಯನ್ನು ಕೂಡ ಬಂಧಿಸಿ ಭಾರತೀಯ ದಂಡ ಸಂಹಿತೆ 411 ವಿಧಿಯನ್ವಯ ಕಳವು ಮಾಲು ಸ್ವೀಕಾರ ಹಾಗೂ 413ರನ್ವಯ ರೂಢಿಗತವಾಗಿ ಕಳವು ಮಾಲುಗಳ ಸ್ವೀಕಾರ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದಲ್ಲಿ ಕಳವು ಮಾಡಿರುವ ಆರು ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ.
ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಧೀಶ ಟಿ.ಪಿ.ರಾಮಲಿಂಗೇ ಗೌಡ ಅವರು ವಿಜಯ ಸೋನಿಯ ಮೇಲಿನ ಭಾರತೀಯ ದಂಡಸಂಹಿತೆ 411 ವಿಧಿಯನ್ವಯ ಕಳವು ಮಾಲು ಸ್ವೀಕಾರ ಆರೋಪ ಸಾಬೀತು ಆಗಿದೆ ಎಂದು ತೀರ್ಪು ನೀಡಿ ಎರಡು ವರ್ಷ ಕಾರಾಗೃಹ ಶಿಕ್ಷೆ ಹಾಗೂ 2,000 ರೂ. ದಂಡ ವಿಧಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಅಂದಿನ ವೃತ್ತ ನಿರೀಕ್ಷರಾಗಿದ್ದ ಭಾಸ್ಕರ್ ರೈ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.
ಮೂರುವರೆ ವರ್ಷ ಹೆಚ್ಚುವರಿ ಶಿಕ್ಷೆ
ಆರೋಪಿಗೆ ಇದೇ ಅಪರಾಧಕ್ಕಾಗಿ ಈ ಮೊದಲು ಕೂಡ ಮಧ್ಯಪ್ರದೇಶದ ಸೆಷನ್ಸ್ ನ್ಯಾಯಾಲಯದಲ್ಲಿ ಶಿಕ್ಷೆ ಆಗಿತ್ತು. ಆದರೆ ಆತ ಬಿಡುಗಡೆಯ ಬಳಿಕವೂ ಇದೇ ಕೃತ್ಯವನ್ನು ಮುಂದುವರಿಸಿದ್ದು, ಈ ಅಪರಾಧ ಸಾಬೀತು ಆಗಿದೆ. ಇಂತಹ ಸಂದರ್ಭದಲ್ಲಿ ಐಪಿಸಿ 75 ರಂತೆ ಅಪರಾಧಿಗೆ ಹೆಚ್ಚುವರಿ ಶಿಕ್ಷೆ ವಿಧಿಸಲು ಅವಕಾಶವಿದ್ದು, ಇದರಂತೆ ಆತನಿಗೆ ಹೆಚ್ಚುವರಿಯಾಗಿ ಮೂರುವರೆ ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಈ ಶಿಕ್ಷೆಯನ್ನು ಆತ ಏಕಕಾಲದಲ್ಲಿ ಅನುಭವಿಸಬೇಕಾಗಿದೆ.