ಏಡ್ಸ್ ರೋಗ ಎದುರಿಸಲು ಸಮಾಜದ ಪ್ರತಿರೋಧ ಎದುರಾಗಬಾರದು -ವಿವೇಕಾನಂದ ಪಂಡಿತ್

ಉಡುಪಿ, ಡಿ.3: ಎಚ್‌ಐವಿ ಹಾಗೂ ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯ. ಏಡ್ಸ್ ರೋಗವನ್ನು ಎದುರಿಸುವಲ್ಲಿ ಸಮಾಜದ ಪ್ರತಿರೋಧ ಎದುರಾಗಬಾರದು. ಇದಕ್ಕಾಗಿ ರೋಗದ ಕುರಿತು ಜನರಿಗೆ ಸ್ಪಷ್ಟ ಮಾಹಿತಿಗಳನ್ನು ನೀಡಬೇಕು ಎಂದು ಜಿಲ್ಲಾ ಪ್ರಧಾನ ಹಿರಿಯ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್.ಪಂಡಿತ್ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿದ್ಯಾ ರತ್ನ ಸ್ಕೂಲ್ ಮತ್ತು ನರ್ಸಿಂಗ್ ಕಾಲೇಜು, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಬೆಂಗಳೂರು, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಮಂಗಳೂರು, ನಾಗರಿಕ ಸಹಾಯವಾಣಿ ಕೇಂದ್ರ ಮತ್ತು ದೀಪ ಜ್ಯೋತಿ ನೆಟ್ ವರ್ಕ್‌ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಏಡ್ಸ್ ದಿನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದು.
ಎಚ್‌ಐವಿ ಮತ್ತು ಏಡ್ಸ್ ಹೇಗೆ ಬರುತ್ತದೆ ಅನ್ನುವುದಕ್ಕಿಂತ, ಅದನ್ನು ಹೇಗೆ ತಡೆಗಟ್ಟಬಹುದೆನ್ನುವ ಬಗ್ಗೆ ನಾವು ಯೋಚಿಸಿ ಕಾರ್ಯೋನ್ಮುಖರಾಗಬೇಕು. ದೇಶದಲ್ಲಿ ಪ್ರಾಕೃತಿಕ ವಿಕೋಪಗಳಾದಾಗ ನಾವು ಹೇಗೆ ಸ್ಪಂದಿಸುತ್ತೇವೊ ಅದೇ ರೀತಿ ಏಡ್ಸ್ ವಿರುದ್ದವೂ ರಾಷ್ಟ್ರವ್ಯಾಪಿ ಸ್ಪಂಧಿಸಬೇಕು ಎಂದವರು ಕರೆ ನೀಡಿದರು.
ಸಮುದಾಯಗಳು ಬದಲಾವಣೆಯನ್ನು ತರುವಲ್ಲಿ ಸಶಕ್ತವಾಗಿವೆ. ಜಾತಿ- ಮತದ ಬೇಧ ತೊರೆದು ನಾವೆಲ್ಲರೂ ಎಚ್‌ಐವಿ ಏಡ್ಸ್‌ಗೆ ಪ್ರತಿರೋಧ ಒಡ್ಡಬೇಕು. ಪಾಶ್ಚಾತ್ಯ ದೇಶಗಳಲ್ಲಿ ಏಡ್ಸ್ ರೋಗದ ಬಗ್ಗೆ ಅರಿವಿರುವುದರಿಂದ ಅವರು ಏಡ್ಸ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.ನಮ್ಮ ದೇಶದಲ್ಲಿ ರುವ ಅರಿವಿನ ಕೊರತೆಯನ್ನು ಹೋಗಲಾಡಿಸಬೇಕು ಎಂದರು.
ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಏಡ್ಸ್ ಬಗ್ಗೆ ಸತ್ಯಕ್ಕಿಂತಲೂ ಮಿಥ್ಯೆ ಹೆಚ್ಚು ಹರಿದಾಡುತ್ತಿದೆ. ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಏಡ್ಸ್ ತಡೆಗಟ್ಟಲು ಇರುವ ಏಕೈಕ ಸಾಧನವೆ ಅರಿವು. ನಾವು ಪಡೆದುಕೊಂಡ ಮಾಹಿತಿಯನ್ನು ಇತರರಿಗೂ ಹಂಚಿದಾಗ ರೋಗದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಸಮಾಜದ ಕೆಲಸಗಳನ್ನು ಮಾಡುವುದು ಸಾಧ್ಯವಿಲ್ಲ. ಸರಕಾರ, ಸಮುದಾಯ, ಸಂಘ-ಸಂಸ್ಥೆ ಮತ್ತು ನಾಗರಿಕರ ಸಹಾಯ ದೊರೆತಾಗ ಏಡ್ಸ್‌ನಂತಹ ರೋಗಗಳನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಜನರಲ್ಲಿ ಸಂವೇದನೆಯನ್ನುಂಟುಮಾಡುವುದು ಮತ್ತು ಹರಡುವಿಕೆಯನ್ನು ತಡೆಗಟ್ಟುವುದು ಮುಖ್ಯ ಗುರಿಯಾಗಬೇಕು. ಎಚ್‌ಐವಿ ಮತ್ತು ಏಡ್ಸ್ ರೋಗದಿಂದ ಬಾಧಿತರಾದವರಿಗೆ ಸರಕಾರ ನೀಡುವ ಸೌಲ್ಯಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಘಟಕದ ಸಬಾಪತಿ ಬಸ್ರೂರು ರಾಜೀವ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿಯ ಪ್ರಥಮ ಉಪಾಧ್ಯಕ್ಷ ರವಿರಾಜ್ ನಾಯಕ್, ಪ್ರಜ್ಞಾ ಕೌನ್ಸಲಿಂಗ್ ಸೆಂಟರಿನ ದೇವದಾಸ್ ಉಚ್ಚಿಲ, ವಿದ್ಯಾರತ್ನ ಸ್ಕೂಲ್ ಮತ್ತು ನಸಿರ್ಂಗ್ ಕಾಲೇಜ್ ಪ್ರಾಂಶುಪಾಲೆ ಡಾ. ಅನಿತಾ ಸಿ. ರಾವ್, ಆರ್‌ಸಿಎಚ್ ಅಧಿಕಾರಿ ಡಾ.ರಾಮರಾವ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕ್ಷಯ ರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ವಿಶೇಷ ಉಪನ್ಯಾಸ ನೀಡಿದರು. ಏಡ್ಸ್ ತಡೆಗಟ್ಟುವ ಪ್ರಕ್ರಿಯೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿಯನ್ನು ಸನ್ಮಾನಿಸಲಾಯಿತು. ಮೇಲ್ವಿಚಾರಕ ಮಹಾಬಲೇಶ್ ಎಂ. ಸ್ವಾಗತಿಸಿ, ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.








