ಗರ್ಭಪಾತಕ್ಕೆ ಆಪ್ತ ಸಮಾಲೋಚನೆ ಕಡ್ಡಾಯ : ಡಿಎಚ್‌ಒ ಡಾ.ರಾಮಕೃಷ್ಣ ರಾವ್
ಜನನಪೂರ್ವ ಲಿಂಗ ನಿರ್ಣಯ ತಡೆ ಸಮಿತಿ ಸಭೆ

ಮಂಗಳೂರು, ಡಿ.3: ದ.ಕ. ಜಿಲ್ಲೆಯ ಗರ್ಭಿಣಿಯರ ತಪಾಸಣೆ ಹಾಗೂ ಹೆರಿಗೆಯಾಗುವ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಗರ್ಭಿಣಿ ದಾಖಲಾತಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು. ಗರ್ಭಪಾತ ಮಾಡಿಸುವ ಮೊದಲೇ ಆಪ್ತ ಸಮಾಲೋಚನೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜನನಪೂರ್ವ ಲಿಂಗ ನಿರ್ಣಯ ತಡೆ ಕಾಯ್ದೆಯ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಕಾನಿಂಗ್ ಸೆಂಟರ್‌ಗಳಿಗೆ ಪ್ರತಿ ತಿಂಗಳು ಭೇಟಿ ನೀಡಿ ಪರಿಶೀಲನೆ ಮಾಡುವುದನ್ನು ಇನ್ನಷ್ಟು ತೀವ್ರಗೊಳಿಸಬೇಕು. ಜಿಲ್ಲಾ ಸಲಹಾ ಸಮಿತಿ ನಿರ್ಣಯದಂತೆ ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳು ಅವರವರ ವ್ಯಾಪ್ತಿಯಲ್ಲಿ ಬರುವ ಸ್ಕಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಬೇಕು. ತೀವ್ರ ಗತಿಯಲ್ಲಿ ಮೇಲ್ವಿಚಾರಣೆ, ಪರಿಶೀಲನೆ ನಡೆಸಬೇಕು ಎಂದು ಡಿಎಚ್‌ಒ ಸೂಚನೆ ನೀಡಿದರು.
ಆಸ್ಪತ್ರೆಗಳಲ್ಲಿ ನಡೆಯುವ ಗರ್ಭಪಾತ ಪ್ರಕರಣಗಳ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವ ಕುರಿತು ಸಭೆಯಲ್ಲಿ ಚರ್ಚಿಸಲಾ ಯಿತು. ಗರ್ಭಿಣಿಯರು ಯಾವುದೇ ವೈದ್ಯರಲ್ಲಿಗೆ ಬಂದು ಎಂಟಿಪಿ (ಗರ್ಭಪಾತ) ಮಾಡಲು ಕೇಳಿಕೊಂಡಲ್ಲಿ, ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪ್ತ ಸಮಾಲೋಚಕರ ಮೂಲಕ ಸಮಾಲೋಚನೆಗಳನ್ನು ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ಸೂಚಿಸಲಾಯಿತು.
ಲಿಂಗಾನುಪಾತ ಇಳಿಕೆಗೆ ಸಂಬಂಧಪಟ್ಟಂತೆ ಜಿಲ್ಲೆಯಾದ್ಯಂತ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕು. ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಡೆಸುವಂತೆಯೂ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿಖಂದರ್ ಪಾಷಾ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ರಶ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಸಲಹಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಯಾವುದೇ ಸಂಸ್ಥೆಯು ತಮ್ಮಲ್ಲಿರುವ ಹಳೆಯ ಸ್ಕಾನಿಂಗ್ ಯಂತ್ರಗಳನ್ನು ಸಕ್ಷಮ ಪ್ರಾಧಿಕಾರ ಅಥವಾ ಇಲಾಖೆಯ ಗಮನಕ್ಕೆ ತಾರದೇ ಅದನ್ನು ಮಾರಾಟ ಮಾಡಬಾರದು. ಸಂಬಂಧಪಟ್ಟ ಸಮಿತಿಯ ಅನುಮತಿ ಇಲ್ಲದೇ ಇಂತಹ ನಿರ್ಣಯ ಕೈಗೊಂಡಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.
- ಡಾ.ರಾಮಕೃಷ್ಣ ರಾವ್,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ







