ಬಳಕೆಯಾಗದೇ ಹಿಂದುಳಿದ ಟ್ರಾನ್ಸಿಟ್ ಹಾಸ್ಟೆಲ್‌ಗಳು !
ಬೆಂಗಳೂರು, ಡಿ.3: ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ವೃತ್ತಿಪರ ಕೋರ್ಸ್, ಉದ್ಯೋಗ ಸಂದರ್ಶನಕ್ಕೆ ಬಂದಾಗ ಉಳಿದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರಂಭಿಸಿರುವ ಟ್ರಾನ್ಸಿಟ್ ಹಾಸ್ಟೆಲ್‌ಗಳಲ್ಲಿ ಪ್ರವೇಶಪಡೆಯುವವರೇ ಇಲ್ಲದಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಅಸುರಕ್ಷತೆಯಲ್ಲಿ ಹೆಣ್ಣು ಮಕ್ಕಳು ನಗರಗಳಲ್ಲಿ ಸಂಚರಿಸಲು ಸಂಕಷ್ಟಪಡುವಂತಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ನಗರದ ವಿವಿಧ 12 ಕಡೆಗಳಲ್ಲಿ ಈ ಹಾಸ್ಟೆಲ್‌ಗಳನ್ನು ತೆರೆದಿದೆ. ಆದರೆ, ಇವುಗಳ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಉದ್ಯೋಗ ಸಂದರ್ಶನ, ವೃತಿಪರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿವಿಧ ಜಿಲ್ಲೆಗಳಿಂದ ಬರುವ ಯುವತಿಯರಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ನಗರದಲ್ಲಿ ಖಾಸಗಿ ಪಿಜಿಗಳಲ್ಲಿ ಉಳಿಯಲು ಸಾವಿರಾರು ರೂ. ವೆಚ್ಚವಾಗುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಹಣ ಭರಿಸುವುದು ಕಷ್ಟ ಎಂದು ಈ ಹಾಸ್ಟೆಲ್ ವ್ಯವಸ್ಥೆ ನೀಡಲಾಗಿದೆ.
ಕಳೆದ ಆರು ತಿಂಗಳಲ್ಲಿ ಅಲ್ಲಿ ಪ್ರವೇಶ ಪಡೆದವರು ಕೇವಲ 24 ಮಂದಿ. ಅದರಲ್ಲೂ ಒಂಬತ್ತು ಹಾಸ್ಟೆಲ್‌ಗಳಲ್ಲಿ ಇದುವರೆಗೂ ಒಬ್ಬ ಮಹಿಳೆಯೂ ಪ್ರವೇಶ ಪಡೆದಿಲ್ಲ. ಒಂದು ಟ್ರಾನ್ಸಿಟ್ ಹಾಸ್ಟೆಲ್‌ನಲ್ಲಿ ಹತ್ತು ಮಂದಿ ಉಳಿದುಕೊಳ್ಳುವ ವ್ಯವಸ್ಥೆ ಇದ್ದು, ಊಟ, ಬಿಸಿ ನೀರು, ಭದ್ರತೆ ಸೇರಿ ಎಲ್ಲ ವ್ಯವಸ್ಥೆ ಇದೆ. ಆದರೆ, ಸೂಕ್ತ ಪ್ರಚಾರವಿಲ್ಲದೆ, ಎಲ್ಲವೂ ಖಾಲಿಯಿವೆ.
ದೊರೆಯುವ ಸೌಲಭ್ಯವೇನು?: ಎಲ್ಲ ವರ್ಗದ ಮಹಿಳೆಯರಿಗೂ ಮೂರು ದಿನಗಳು ತಂಗಲು ಅವಕಾಶ, ಉಚಿತ ಊಟ, ಉಪಾಹಾರ, ಟೀ, ಕಾಫಿ ಮತ್ತು ಸ್ನಾನಕ್ಕೆ ಬಿಸಿನೀರಿನ ಸೌಲಭ್ಯ, ವೈಯಕ್ತಿಕ ದಾಖಲಾತಿಗಳು ಹಾಗೂ ಇನ್ನಿತರೆ ವಸ್ತುಗಳನ್ನು ಇರಿಸಿಕೊಳ್ಳಲು ಭದ್ರತಾ ಕಪಾಟು ಸೌಲಭ್ಯ ದೊರೆಯಲಿದೆ. ಈ ಯೋಜನೆಯು ಒಂಟಿಯಾಗಿ ಬೆಂಗಳೂರಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ.
ಹಾಸ್ಟೆಲ್‌ಗೆ ಸೇರುವುದು ಹೇಗೆ?: ಪ್ರವೇಶ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದು ಮಹಿಳೆಯರು ಹತ್ತಿರದ ವಸತಿ ಗೃಹಕ್ಕೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ, ವಿಳಾಸ ಒಳಗೊಂಡ ಗುರುತಿನ ಚೀಟಿ, ಪೋಷಕರ ಫೋನ್ ನಂಬರ್, ವಿಳಾಸ ನೀಡಬೇಕು. ನೋಂದಣಿಯಾದ ನಂತರ ರೂಮ್ ದೊರೆಯಲಿದೆ.







