ನ್ಯಾಯದಾನ ವ್ಯವಸ್ಥೆಯ ಮೌಲ್ಯ, ಘನತೆ ಕಾಪಾಡಲು ನ್ಯಾ. ಕಡ್ಲೂರು ಸತ್ಯನಾರಾಯಣಾಚಾರ್ಯ ಕರೆ
ವಕೀಲರ ದಿನಾಚರಣೆ

ಮಂಗಳೂರು, ಡಿ.3: ಪ್ರಜಾಸತ್ತಾತ್ಮಕ ಸಮಾಜದಲ್ಲಿ ನ್ಯಾಯದಾನ ಶ್ರೇಷ್ಠ ಪ್ರಕ್ರಿಯೆಯಾಗಿದೆ. ಇದರಲ್ಲಿ ನ್ಯಾಯವಾದಿಗಳ ಪಾತ್ರವೂ ಅತಿ ಮಹತ್ವದ್ದಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಜೊತೆಗೆ ಪವಿತ್ರವಾದ ವಕೀಲ ವೃತ್ತಿಯ ಮೌಲ್ಯ ಹಾಗೂ ಘನತೆಯನ್ನು ಎತ್ತಿಹಿಡಿಯಲು ವಕೀಲರ ಸಮುದಾಯ ವಿಶೇಷ ಆದ್ಯತೆ ನೀಡಬೇಕು ಎಂದು ದ.ಕ. ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಕರೆ ನೀಡಿದರು.
ಮಂಗಳೂರು ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಲಯ ಕಟ್ಟಡದ 6ನೇ ಅಂತಸ್ತಿನ ಸಭಾಭವನದಲ್ಲಿ ಮಂಗಳವಾರ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕವಾಗಿ ನ್ಯಾಯವಾದಿಗಳಿಗೆ ವಿಶೇಷ ಮಹತ್ವ ಮತ್ತು ಗೌರವ ಇದೆ. ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ನೆಲೆಯಲ್ಲಿ ವಕೀಲರು ವಿಶೇಷ ಪಾತ್ರ ನಿರ್ವಹಿಸುತ್ತಾರೆ. ಈ ಕಾರಣಕ್ಕೆ ವಕೀಲ ಸಮುದಾಯದ ಮೇಲೆ ಗುರುತರವಾದ ಜವಾಬ್ದಾರಿ ಇದೆ ಮತ್ತು ಇದರ ಅರಿವು ಪ್ರತಿಯೊಬ್ಬ ನ್ಯಾಯವಾದಿಯಲ್ಲೂ ಇರಬೇಕು ಎಂದು ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಹೇಳಿದರು.
ನ್ಯಾಯಾಂಗ ವ್ಯವಸ್ಥೆ ಎಂಬುದು ನಿಂತ ನೀರಲ್ಲ. ಅದು ಚಲನಶೀಲವಾಗಿದೆ. ಈ ವ್ಯವಸ್ಥೆಯಲ್ಲಿ ಬೆಳವಣಿಗೆ ಆಗುವುದಿದ್ದರೂ ಅದರಲ್ಲಿ ವಕೀಲರ ಪಾತ್ರ ಅತ್ಯಂತ ಗಮನಾರ್ಹವಾಗಿರುತ್ತದೆ. ತಮ್ಮ ವೃತ್ತಿಗೆ ಯಾವುದೇ ಧಕ್ಕೆ ಬರದಂತೆ ನ್ಯಾಯದಾನದ ವ್ಯವಸ್ಥೆಯಲ್ಲಿ ಸಕಾರಾತ್ಮಕವಾಗಿ ಪಾಲ್ಗೊಂಡಾಗ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಮೇಲಸ್ತರಕ್ಕೆ ಏರಬಲ್ಲುದು ಎಂದು ನ್ಯಾಯಾಧೀಶ ಕಡ್ಲೂರು ಅಭಿಪ್ರಾಯಪಟ್ಟರು.
‘ಪ್ರಜಾಪ್ರಭುತ್ವ ಭಾರತದಲ್ಲಿ ವಕೀಲರ ಪಾತ್ರ’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಜಿ.ಕೆ. ಪರಮೇಶ್ವರ ಜೊಯಿಸ ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ.
ವೈಜ್ಞಾನಿಕವಾಗಿಯೂ, ತಾಂತ್ರಿಕವಾಗಿಯೂ ನಡೆದಿರುವ ಪ್ರಗತಿ ನ್ಯಾಯಾಂಗ ವ್ಯವಸ್ಥೆಯಲ್ಲೂ ಬಂದಿದೆ. ಇದರಿಂದ ವಕೀಲರ ಕಾರ್ಯನಿರ್ವಹಣೆಯಲ್ಲೂ ಬದಲಾವಣೆ ಆಗಿದೆ. ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡ ಹಾಗೂ ಹೊಸ ಹೊಸ ಅನ್ವೇಷಣೆಗಳ ವೃತ್ತಿಬದುಕನ್ನು ನಡೆಸುವ ಯುವ ವಕೀಲರಿಗೆ ಇಲ್ಲಿ ವಿಫುಲವಾದ ಅವಕಾಶಗಳ ಬಾಗಿಲು ತೆರೆದಿದೆ ಎಂದು ಹೇಳಿದರು.
ಹಿರಿಯ ವಕೀಲ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ ಮಾತನಾಡಿ, ಮಂಗಳೂರು ವಕೀಲರ ಸಂಘಕ್ಕೆ ದೇಶದಲ್ಲಿ ಉನ್ನತ ಸ್ಥಾನಮಾನವಿದೆ. ಇಲ್ಲಿ ಕಾರ್ಯನಿರ್ವಹಿಸಿದ ಹಲವು ಖ್ಯಾತನಾಮ ವಕೀಲರು ದೇಶದ ಬೇರೆ ಬೇರೆ ಭಾಗದಲ್ಲಿ ಕರ್ತವ್ಯ ನಿರ್ವಹಿಸಿ ದೇಶದ ನ್ಯಾಯಾಂಗ ವ್ಯವಸ್ಥೆಗೆ ಅಪಾರ ಮೌಲ್ಯ ಘನತೆ, ಮತ್ತು ಗೌರವವನ್ನು ತಂದುಕೊಟ್ಟಿದ್ದಾರೆ. ಇದು ನಮಗೆ ಸದಾ ಹೆಮ್ಮೆಯ ವಿಷಯ ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಜಿನೇಂದ್ರ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ವಂದಿಸಿದರು. ವಿಕ್ರಂ ಕಾರ್ಯಕ್ರಮ ನಿರೂಪಿಸಿದರು.







