'ಒಳ ಒಪ್ಪಂದ'ದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?
ಉಪ ಚುನಾವಣೆ

ಮೈಸೂರು,ಡಿ.3: ನಾವು ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ನಮಗೆ ಜೆಡಿಎಸ್ ಹಾಗೂ ಬಿಜೆಪಿ ಇಬ್ಬರೂ ವೈರಿಗಳೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ 15 ಕ್ಷೇತ್ರಗಳನ್ನು ಗೆದ್ದು ಸಿಹಿ ಹಂಚುತ್ತೇವೆ ಎಂದು ಹೇಳಿದ್ದಾರೆ. ನಾವು ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ಜೆಡಿಎಸ್ ಹಾಗೂ ಬಿಜೆಪಿ ಇಬ್ಬರೂ ನಮಗೆ ವೈರಿಗಳು, ನಾವು 15 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.
ಅನರ್ಹ ಶಾಸಕರು ಪಕ್ಷಾಂತರ ಮಾಡಿದ್ದಾರೆ ಎಂದು ಜನ ಆಕ್ರೋಶಗೊಂಡಿದ್ದಾರೆ. ಅನರ್ಹ ಶಾಸಕರು ತಮ್ಮನ್ನು ಮಾರಿಕೊಂಡಿದ್ದಾರೆ, ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಹೇಳಿದರು.
'ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ವೈಟ್ ವಾಶ್ ಮಾಡುತ್ತಾರೆ' ಎಂಬ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನನ್ನ ಬಗ್ಗೆ ಮಾತನಾಡುವ ಮೊದಲು ಸೋಮವಾರ ಚುನಾವಣಾ ಪ್ರಚಾರದಲ್ಲಿ ಏಕೆ ಘೇರಾವ್ ಹಾಕಿದರು ಎಂಬುದನ್ನು ಅರ್ಥಮಾಡಿಕೊಳ್ಳಲಿ. ಪಾಪ ಅವರು ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಹರಿಹಾಯ್ದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು 'ಡಿ.9 ರ ನಂತರ ಸರ್ಕಾರ ಉಳಿಯುವುದಿಲ್ಲ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂಬ ಹೇಳಿಕೆ ಸುಳ್ಳು, ಅವರು ಹಾಗೆ ಹೇಳಿಲ್ಲ. ಮಾಧ್ಯಮಗಳೇ ಅದನ್ನು ಅರ್ಥ ಕಲ್ಪಿಸಿ ಸುದ್ದಿ ಮಾಡಿದ್ದಾರೆ. ಖರ್ಗೆ ಅವರು 15 ಸ್ಥಾನ ಗೆದ್ದು ಸಿಹಿ ಹಂಚುತ್ತೇವೆ ಎಂದು ಹೇಳಿದ್ದಾರೆಯೇ ಹೊರತು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ನಾವು ಈ ಚುನಾವಣೆಯಲ್ಲಿ ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ಬಿಜೆಪಿ ಎಷ್ಟು ವೈರಿನೋ ಜೆಡಿಎಸ್ ಕೂಡ ಅಷ್ಟೇ ವೈರಿ. 15ಕ್ಕೆ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದರು.







