ಮಹಿಳೆಯ ಗರ್ಭಾಶಯದಿಂದ 7 ಕೆ.ಜಿಯ ಬೃಹತ್ ಗಡ್ಡೆ ಹೊರಕ್ಕೆ ತೆಗೆದ ವೈದ್ಯರು

ಮೈಸೂರು,ಡಿ.3: ಮೈಸೂರಿನ ಸಿದ್ದಾರ್ಥ ನಗರದ ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯರು ಮಹಿಳೆಯೋರ್ವರ ಗರ್ಭಾಶಯದಿಂದ 7 ಕಿಲೋ ತೂಕದ ಬೃಹತ್ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
45 ವರ್ಷ ವಯಸ್ಸಿನ ಶಿವಮ್ಮ ಎಂಬ ಮಹಿಳೆಯು ಹೊಟ್ಟೆ ಭಾಗದಲ್ಲಿ ಗಡ್ಡೆಯ ತೊಂದರೆಯೊಂದಿಗೆ ಮೈಸೂರಿನ ಸಿದ್ದಾರ್ಥ ನಗರದ ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಗರ್ಭಾಶಯದಲ್ಲಿ ಬೃಹತ್ ಗಡ್ಡೆ ಬೆಳೆದಿರುವುದು ವೈದ್ಯಕೀಯ ತನಿಖೆಯಲ್ಲಿ ತಿಳಿದು ಬಂದಿತ್ತು. ಸ್ಪೈನಲ್ ಎಪಿಡ್ಯುರಲ್ ಅನಸ್ಥೇಶಿಯಾ ಅಡಿಯಲ್ಲಿ ಈ ಗಡ್ಡೆಯನ್ನು ತೆಗೆದು ಹಾಕಲು ಟೋಟಲ್ ಅಬ್ಡಾಮಿನಲ್ ಹೆಸ್ಟೆರೆಕ್ಟೊಮಿ ಶಸ್ತ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು.
ಅದರಂತೆ ಮೈಸೂರಿನ ಸಿದ್ದಾರ್ಥ ನಗರದ ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಈ ತಂಡದಲ್ಲಿ ಹಿರಿಯ ಪ್ರಸೂತಿ ತಜ್ಞರು ಮತ್ತು ಮಹಿಳಾ ರೋಗ ಸಲಹಾ ತಜ್ಞರಾದ ಡಾ.ಎಂ.ಎಸ್.ಪ್ರಸಾದ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ, ಹಿರಿಯ ಪ್ರಸೂತಿ ತಜ್ಞರು ಮತ್ತು ಮಹಿಳಾ ರೋಗ ಸಲಹಾ ತಜ್ಞರಾದ ಡಾ.ಸರಳಾ ಚಂದ್ರಶೇಖರ್, ಅರಿವಳಿಕೆ ಸಲಹಾ ತಜ್ಞ ಡಾ.ಹರೀಶ್ ಕುಮಾರ್, ಶಸ್ತ್ರ ಚಿಕಿತ್ಸಾ ಸಿಬ್ಬಂದಿ ಸೇರಿದ್ದರು ಎಂದು ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ತಿಳಿಸಿದ್ದಾರೆ.







