ವೈಯಕ್ತಿಕ ಮಾಹಿತಿ ರಕ್ಷಣೆ ಮಸೂದೆಗೆ ಸಚಿವ ಸಂಪುಟ ಅನುಮೋದನೆ

ಹೊಸದಿಲ್ಲಿ, ಡಿ.4: ಖಾಸಗಿ ಮಾಹಿತಿಯನ್ನು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಕುರಿತು ಚೌಕಟ್ಟನ್ನು ರೂಪಿಸಿರುವ ‘ವೈಯಕ್ತಿಕ ಮಾಹಿತಿ ರಕ್ಷಣೆ ಮಸೂದೆ 2019’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದನ್ನು ಈಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಮಾಹಿತಿ ಸುರಕ್ಷೆ ಕುರಿತ ಕಾನೂನಿನ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿಎನ್ ಶ್ರೀಕೃಷ್ಣ ನೇತೃತ್ವದ ಸಮಿತಿಯು 2018ರ ಜುಲೈಯಲ್ಲಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಒಪ್ಪಿಗೆ, ಮಾಹಿತಿ ರಕ್ಷಣೆ ಪ್ರಾಧಿಕಾರ, ಡೇಟಾವನ್ನು ಮರುಪಡೆಯುವ ಹಕ್ಕು ಮತ್ತು ಮಕ್ಕಳ ಹಕ್ಕಿನ ಕುರಿತು 213 ಪುಟಗಳ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ವೈಯಕ್ತಿಕ ಡೇಟಾದ ಪರಿಷ್ಕರಣೆ, ಬಳಕೆ, ಹಂಚಿಕೆ, ಬಹಿರಂಗಗೊಳಿಸುವುದು, ಸಂಗ್ರಹಿಸುವುದು ಇತ್ಯಾದಿ ಪ್ರಕ್ರಿಯೆಗಳು ಈ ಕಾನೂನಿನಡಿ ಬರಲಿವೆ ಎಂದು ವರದಿ ತಿಳಿಸಿತ್ತು.
ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸುವ ಪ್ರಸ್ತಾವಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೋಟೆಲ್ ನಿರ್ಮಾಣ ಕಾರ್ಯ ಮತ್ತು ನಿರ್ವಹಣೆಯನ್ನು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಜಂಟಿಯಾಗಿ ನಿರ್ವಹಿಸಲಿದೆ. ಕೇಂದ್ರ ಸಂಸ್ಕೃತ ವಿವಿ ಮಸೂದೆ, ಪೋಷಕರ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಹಿತಚಿಂತನೆ(ತಿದ್ದುಪಡಿ) ಮಸೂದೆಗೂ ಅನುಮೋದನೆ ನೀಡಲಾಗಿದ್ದರೆ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ(ದ್ವಿತೀಯ ತಿದ್ದುಪಡಿ) ಮಸೂದೆಯನ್ನು ಹಿಂಪಡೆಯಲಾಗಿದೆ.







