ಆರು ವರ್ಷಗಳಲ್ಲಿ ಗ್ರಾಮೀಣ ಬಡತನ ದರ ಶೇ.4ರಷ್ಟು ಏರಿಕೆಯಾಗಿರುವ ಸಾಧ್ಯತೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.4: ಭಾರತದ ಗ್ರಾಮೀಣ ಬಡತನ ದರವು 2011-12 ಮತ್ತು 2017-18ರ ನಡುವಿನ ಆರು ವರ್ಷಗಳ ಅವಧಿಯಲ್ಲಿ ಶೇ.4ರಷ್ಟು ಹೆಚ್ಚಳವಾಗಿರಬಹುದು ಎಂದು ಇತ್ತೀಚಿನ ಬಳಕೆದಾರ ವೆಚ್ಚ ದತ್ತಾಂಶಗಳ ನೂತನ ವಿಶ್ಲೇಷಣೆಯು ಬೆಟ್ಟು ಮಾಡಿದೆ.
ಇದೇ ಅವಧಿಯಲ್ಲಿ ನಗರ ಬಡತನ ದರಗಳಲ್ಲಿ ಶೇ.5ರಷ್ಟು ಇಳಿಕೆಯಾಗಿದ್ದು, ಒಟ್ಟಾರೆಯಾಗಿ ಮೂರು ಕೋಟಿ ಜನರ ಆದಾಯ ಭಾರತದ ಅಧಿಕೃತ ಬಡತನ ರೇಖೆಗಿಂತ ಕೆಳಗಿಳಿದಿದ್ದು ಬಡವರ ವರ್ಗಕ್ಕೆ ಸೇರಿಕೊಂಡಿದ್ದಾರೆ ಎಂದು ವಾಣಿಜ್ಯ ವೃತ್ತಪತ್ರಿಕೆ ‘ಮಿಂಟ್’ ತನ್ನ ವಿಶ್ಲೇಷಣಾ ವರದಿಯಲ್ಲಿ ತಿಳಿಸಿದೆ.
ಗ್ರಾಮೀಣ ಜನಸಂಖ್ಯೆ ಹೆಚ್ಚಿರುವುದನ್ನು ಪರಿಗಣಿಸಿದರೆ 2017-18ರಲ್ಲಿ ಅಂದಾಜು ಒಟ್ಟಾರೆ ಬಡತನ ದರವು ಸುಮಾರು ಶೇ.1ರಷ್ಟು ಏರಿಕೆಯಾಗಿ ಶೇ.23ನ್ನು ತಲುಪಿದೆ. ಈ ಏರಿಕೆಯು ಕಳೆದ ಆರು ವರ್ಷಗಳಲ್ಲಿ ಮೂರು ಕೋಟಿ ಜನರು ಬಿಪಿಎಲ್ ಗುಂಪಿಗೆ ಸೇರ್ಪಡೆಯಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ವರದಿಯು ಹೇಳಿದೆ.
ಬಡತನ ದರವನ್ನು ಬಡತನ ರೇಖೆಗಿಂತ ಕೆಳಗಿರುವವರ ಶೇಕಡಾವಾರು ಜನಸಂಖ್ಯಾ ಪ್ರಮಾಣ ಎಂದು ವ್ಯಾಖ್ಯಾನಿಸಲಾಗಿದೆ. ಮಿಂಟ್ ವಿಶ್ಲೇಷಣೆ ನಿಖರವಾಗಿದ್ದರೆ ಭಾರತದ ಬಡತನ ದರವು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಏರಿಕೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿಯ ಹಿಂದಿನ ಬಳಕೆದಾರ ವೆಚ್ಚ ಸಮೀಕ್ಷೆಯ ದತ್ತಾಂಶಗಳನ್ನು ವಿಶ್ಲೇಷಣೆಗೊಳಪಡಿ ಸಲಾಗಿತ್ತು. ಸಮೀಕ್ಷೆಯು ಸರಿಯಾಗಿ ನಡೆದಿಲ್ಲ ಎಂಬ ನೆಪವೊಡ್ಡಿ ನರೇಂದ್ರ ಮೋದಿ ಸರಕಾರವು ವರದಿಯನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದ ಬಳಿಕ ಈ ದತ್ತಾಂಶಗಳು ವಿವಾದಕ್ಕೆ ಸಿಲುಕಿದ್ದವು.
ರಾಷ್ಟ್ರಮಟ್ಟದಲ್ಲಿ ಒಟ್ಟಾರೆ ಬಡತನ ದರದಲ್ಲಿ ಅಲ್ಪ ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಪೂರ್ವ ಮತ್ತು ಈಶಾನ್ಯ ರಾಜ್ಯಗಳು ಬಡತನ ದರದಲ್ಲಿ ತೀವ್ರ ಏರಿಕೆಯನ್ನು ದಾಖಲಿಸಿದ್ದರೆ ಕರ್ನಾಟಕವನ್ನು ಹೊರತುಪಡಿಸಿ ದಕ್ಷಿಣದ ರಾಜ್ಯಗಳು ಬಡತನ ದರವನ್ನು ತಗ್ಗಿಸುವುದರಲ್ಲಿ ಸಫಲಗೊಂಡಿವೆ. ದೊಡ್ಡ ರಾಜ್ಯಗಳ ಪೈಕಿ ಬಿಹಾರವು 2011-12 ಮತ್ತು 2017-18ರ ನಡುವಿನ ಆರು ವರ್ಷಗಳ ಅವಧಿಯಲ್ಲಿ ಬಡತನ ದರದಲ್ಲಿ ಅತ್ಯಂತ ಹೆಚ್ಚಿನ ಏರಿಕೆಯನ್ನು ಕಂಡಿದೆ. ಅದು ಶೇ.17ರಷ್ಟು ಜಿಗಿದು ಶೇ.50.47ಕ್ಕೆ ತಲುಪಿದೆ. ಜಾರ್ಖಂಡ್ (ಶೇ.8.6) ಮತ್ತು ಒಡಿಶಾ (ಶೇ.8.1) ಬಡತನ ದರದಲ್ಲಿ ಹೆಚ್ಚಿನ ಏರಿಕೆಯನ್ನು ಕಂಡಿರುವ ಇತರ ದೊಡ್ಡ ರಾಜ್ಯಗಳಾಗಿವೆ. ಇವೆರಡು ರಾಜ್ಯಗಳ ಶೇ.40ಕ್ಕೂ ಅಧಿಕ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವಿಶ್ಲೇಷಣಾ ವರದಿಯು ಹೇಳಿದೆ.
ಇದೇ ಅವಧಿಯಲ್ಲಿ ಪ.ಬಂಗಾಳ (ಶೇ.6),ಗುಜರಾತ (ಶೇ.5) ಮತ್ತು ತಮಿಳುನಾಡು (ಶೇ.5) ಇವು ಬಡತನ ದರದಲ್ಲಿ ಅತ್ಯಂತ ಹೆಚ್ಚಿನ ಇಳಿಕೆಯನ್ನ್ನು ತೋರಿಸಿರುವ ದೊಡ್ಡ ರಾಜ್ಯಗಳಾಗಿದ್ದರೆ,ಶ್ರೀಮಂತ ರಾಜ್ಯಗಳಲ್ಲಿ ಮಹಾರಾಷ್ಟ್ರವು ಬಡತನ ದರದಲ್ಲಿ ಅತ್ಯಂತ ಹೆಚ್ಚಿನ ಇಳಿಕೆ (ಶೇ.5)ಯನ್ನು ಸಾಧಿಸಿದೆ.