ಸಮಾಜಕ್ಕೆ ಬುದ್ದಿವಂತರಿಗಿಂತ ಹೃದಯವಂತರು ಬೇಕಾಗಿದ್ದಾರೆ: ಟಿ.ಎಸ್.ನಾಗಾಭರಣ

ಬೆಂಗಳೂರು, ಡಿ.4: ಇವತ್ತಿನ ಆಧುನಿಕ ಸಮಾಜಕ್ಕೆ ಬುದ್ಧಿವಂತರಿಗಿಂತ ಹೃದಯವಂತರು ಬೇಕಾಗಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ‘ಗ್ರಾಂಡ್ ಕ್ಯಾಂಟಾಟ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಸಂಬಂಧಗಳಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ನಮ್ಮ ರಂಗಭೂಮಿಗೆ ಜನಸಮುದಾಯವನ್ನು ಒಟ್ಟುಗೂಡಿಸುವ ಶಕ್ತಿಯಿದೆ. ಮನುಷ್ಯನ ಚಿಂತನೆಗಳನ್ನು ಮಾನವೀಯ ನೆಲೆಯಲ್ಲಿ ವಿಸ್ತರಿಸಿಕೊಳ್ಳಲು ನಮ್ಮ ಕಲೆ, ಸಾಹಿತ್ಯ ಸಹಾಯಕವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪ್ರೊ.ಜಾಫೆಟ್ ಮಾತನಾಡಿ, ನಮ್ಮ ವಿಶ್ವವಿದ್ಯಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ನಡೆದಿರುವ ಚರ್ಚಾಗೋಷ್ಟಿಗಳು, ಸಂವಾದ ಹಾಗೂ ವಿಚಾರ ಸಂಕಿರಣಗಳು ನಾಡಿನ ದಿಕ್ಕುದೆಸೆಯನ್ನು ಬದಲಿಸಿವೆ. ಇದೆಲ್ಲವುಗಳನ್ನು ಮುಂದುವರೆಸುವ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಪಿ.ಪ್ರದೀಪ್, ಪ್ರೊ.ಯಾಂಗ್‌ಡುಕ್ ಮಾನ್, ಥಾಮಸ್ ಹೆಂಡರಸನ್, ಜಿಯೋನ್ ಯೋಹಾನ್ ಉಪಸ್ಥಿತರಿದ್ದರು.







