ಬುಮ್ರಾ ಬೌಲಿಂಗ್ ದಾಳಿಯನ್ನು ಸುಲಭವಾಗಿ ಎದುರಿಸಬಹುದು: ಅಬ್ದುಲ್ ರಝಾಕ್

ಕರಾಚಿ, ಡಿ.4: ನಾನು ಈಗ ಸಕ್ರಿಯ ಕ್ರಿಕೆಟಿಗನಾಗಿರುತ್ತಿದ್ದರೆ ಬೇಬಿ ಬೌಲರ್ ಜಸ್‌ಪ್ರೀತ್ ಬುಮ್ರಾರ ಬೌಲಿಂಗ್ ದಾಳಿಯನ್ನು ಸುಲಭವಾಗಿ ಎದುರಿಸುತ್ತಿದ್ದೆ ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್ ಹೇಳಿದ್ದಾರೆ.
ನಾನು ವಿಶ್ವದರ್ಜೆಯ ಬೌಲರ್‌ಗಳಾದ ಆಸ್ಟ್ರೇಲಿಯದ ಗ್ಲೆನ್ ಮೆಗ್ರಾತ್ ಹಾಗೂ ಸಹ ಆಟಗಾರ ವಸೀಂ ಅಕ್ರಂ ಬೌಲಿಂಗ್‌ನ್ನು ಎದುರಿಸಿದ್ದೇನೆ. ನನ್ನ ಎದುರು ಬುಮ್ರಾ ಅವರು ಮಗುವಿನಂತಹ ಬೌಲರ್. ನಾನು ಅವರನ್ನು ಸುಲಭವಾಗಿ ಎದುರಿಸಿ ಪ್ರಾಬಲ್ಯ ಸಾಧಿಸಬಲ್ಲೆ ಎಂದು ಕ್ರಿಕೆಟ್ ಪಾಕಿಸ್ತಾನಕ್ಕೆ ರಝಾಕ್ ತಿಳಿಸಿದ್ದಾರೆ.
40ರ ಹರೆಯದ ರಝಾಕ್ 46 ಟೆಸ್ಟ್, 265 ಏಕದಿನ ಹಾಗೂ 32 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.
ನನ್ನ ಕಾಲದಲ್ಲಿ ಶ್ರೇಷ್ಠ ಬೌಲರ್‌ಗಳ ದಾಳಿಯನ್ನು ಎದುರಿಸಿದ್ದೆ.ಹೀಗಾಗಿ ಬುಮ್ರಾರಂತಹ ಬೌಲರ್‌ನ್ನು ಎದುರಿಸುವುದು ಕಷ್ಟವೇನಲ್ಲ. ಒತ್ತಡ ಆತನ ಮೇಲೆ ಜಾಸ್ತಿ ಇರುತ್ತದೆ ಎಂದು ಹೇಳಿದರು.
ಬುಮ್ರಾ ಅವರ ಅನನ್ಯ ಬೌಲಿಂಗ್ ಶೈಲಿಯನ್ನು ಶ್ಲಾಘಿಸಿದ ರಝಾಕ್, ಬುಮ್ರಾ ಈಗ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರ ಬೌಲಿಂಗ್‌ನಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅವರ ಬೌಲಿಂಗ್ ಶೈಲಿ ಅನನ್ಯ. ಅವರು ನಿಖರವಾಗಿ ಬೌಲಿಂಗ್ ಮಾಡುತ್ತಿರುವ ಕಾರಣ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.







