ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಜಯ
ತ್ರಿರಾಷ್ಟ್ರ ಹಾಕಿ ಟೂರ್ನಮೆಂಟ್
ಕ್ಯಾನ್‌ಬೆರ್ರಾ (ಆಸ್ಟ್ರೇಲಿಯ), ಡಿ.4: ನ್ಯೂಝಿಲ್ಯಾಂಡ್ ತಂಡವನ್ನು ಬುಧವಾರ 2-0 ಅಂತರದಿಂದ ಮಣಿಸಿದ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡ ತ್ರಿರಾಷ್ಟ್ರ ಹಾಕಿ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದೆ.
ಭಾರತದ ಪರವಾಗಿ ಸ್ಟ್ರೈಕರ್ ಲಾಲ್‌ರಿಂಡಿಕಿ(15ನೇ ನಿಮಿಷ)ಹಾಗೂ ಮಿಡ್ ಫೀಲ್ಡರ್ ಪ್ರಭಲೀನ್ ಕೌರ್(60ನೇ ನಿಮಿಷ)ತಲಾ ಒಂದು ಗೋಲು ಗಳಿಸಿ ಗೆಲುವಿಗೆ ನೆರವಾದರು.
ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಆಕ್ರಮಣಕಾರಿ ಶೈಲಿಯ ಆಟದ ಮೂಲಕ ನ್ಯೂಝಿಲ್ಯಾಂಡ್‌ನ್ನು ಕಟ್ಟಿಹಾಕಿತು. ನ್ಯೂಝಿಲ್ಯಾಂಡ್ ಮಂಗಳವಾರ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯವನ್ನು 3-1 ಅಂತರದಿಂದ ಮಣಿಸಿತ್ತು. ಭಾರತ ಮೂರನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದು ಮೇಲುಗೈ ಸಾಧಿಸುವ ಸೂಚನೆ ನೀಡಿತ್ತು. ಆದರೆ, ಆ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಯಿತು.
ನ್ಯೂಝಿಲ್ಯಾಂಡ್‌ನ ರಕ್ಷಣಾಕೋಟೆ ಯನ್ನು ಭೇದಿಸಿದ ಭಾರತ 15ನೇ ನಿಮಿಷದಲ್ಲಿ ಗೋಲು ಖಾತೆ ತೆರೆಯಲು ಸಫಲವಾಯಿತು.
ನ್ಯೂಝಿಲ್ಯಾಂಡ್ ಎರಡನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಮೂಲಕ ಸಮಬಲ ಸಾಧಿಸುವ ಅವಕಾಶ ಪಡೆದಿತ್ತು. ಆದರೆ, ಭಾರತದ ಗೋಲ್‌ಕೀಪರ್ ಬಿಚು ದೇವಿಖರಿಬಮ್ ಎದುರಾಳಿ ತಂಡಕ್ಕೆ ಗೋಲನ್ನು ನಿರಾಕರಿಸಿದರು. ಉಭಯ ತಂಡಗಳು ಗೋಲು ಗಳಿಸಲು ತೀವ್ರ ಹೋರಾಟವನ್ನು ಮುಂದುವರಿಸಿದವು. ಆದರೆ ಯಾವ ತಂಡಕ್ಕೂ ಸ್ಪಷ್ಟ ಅವಕಾಶ ಸಿಗಲಿಲ್ಲ. ಹೀಗಾಗಿ ಮೊದಲಾರ್ಧದ ಅಂತ್ಯಕ್ಕೆ ಭಾರತ 1-0 ಮುನ್ನಡೆ ವಿಸ್ತರಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಗೆ ಹಲವು ಅವಕಾಶ ಲಭಿಸಿದ್ದವು. ಭಾರತೀಯ ತಂಡ ಎರಡು ಪೆನಾಲ್ಟಿ ಅವಕಾಶವನ್ನು ಪಡೆದುಕೊಂಡಿತು. ಆದರೆ, ನ್ಯೂಝಿಲ್ಯಾಂಡ್‌ನ ಗೋಲ್‌ಕೀಪರ್ ಕೆಲ್ಲಿ ಕಾರ್ಲಿನ್ ಭಾರತಕ್ಕೆ ಮುನ್ನಡೆಯನ್ನು ನಿರಾಕರಿಸಿದರು. ನ್ಯೂಝಿಲ್ಯಾಂಡ್ ಕೂಡ 3ನೇ ಕ್ವಾರ್ಟರ್‌ನ ಕೊನೆಯಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಭಾರತದ ಡಿಫೆಂಡರ್‌ಗಳು ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ಗೆ ಮುನ್ನಡೆಯನ್ನು ಕಾಯ್ದು ಕೊಂಡರು. ನಾಲ್ಕನೇ ಕ್ವಾರ್ಟರ್‌ನಲ್ಲಿ ನ್ಯೂಝಿಲ್ಯಾಂಡ್ ಗೋಲನ್ನು ಸಮಬಲಗೊಳಿಸುವ ನಿಟ್ಟಿನಲ್ಲಿ ಹೋರಾಟ ಮುಂದುವರಿಸಿತು. ಮತ್ತೊಂದೆಡೆ ಭಾರತ ತನ್ನ ಮುನ್ನಡೆ ಹೆಚ್ಚಿಸಿಕೊಳ್ಳುವತ್ತ ಚಿತ್ತವಿರಿಸಿತು.
ಕೊನೆಯ 15 ನಿಮಿಷಗಳ ಆಟದಲ್ಲಿ ದಿಟ್ಟ ಹೋರಾಟ ನೀಡಿದ ಭಾರತ 48ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಪಂದ್ಯ ಮುಗಿಯಲು 30 ಸೆಕೆಂಡ್‌ಗಳು ಬಾಕಿ ಇರುವಾಗ ಭಾರತ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಗಿಟ್ಟಿಸಿಕೊಂಡಿತು. ಈ ಬಾರಿ ಪ್ರಭ್‌ಲೀನ್ ಕೌರ್ ಯಾವುದೇ ತಪ್ಪು ಮಾಡದೆ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ತಂಡಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಭಾರತ ಗುರುವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡವನ್ನು ಮುಖಾಮುಖಿಯಾಗಲಿದೆ.







