ದಲಿತರನ್ನು ಪ್ರತ್ಯೇಕಿಸಲು ಕಟ್ಟಲಾಗಿತ್ತು ಎನ್ನಲಾದ ಗೋಡೆ ನೆಲಸಮ
17 ಜನರ ಸಾವಿಗೆ ಕಾರಣವಾಗಿದ್ದ ಗೋಡೆ

ಕೊಯಮತ್ತೂರು,ಡಿ.5: ಸೋಮವಾರ ಬೆಳಗಿನ ಜಾವ ಇಲ್ಲಿಯ ನಡೂರು ಗ್ರಾಮದಲ್ಲಿಯ ದಲಿತರ ಬಡಾವಣೆಯಲ್ಲಿನ ಮನೆಗಳ ಮೇಲೆ ಕುಸಿದು ಬಿದ್ದು 10 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 17 ಜನರ ಸಾವಿಗೆ ಕಾರಣವಾಗಿದ್ದ 15 ಅಡಿ ಎತ್ತರದ ಆವರಣ ಗೋಡೆಯ ಅಳಿದುಳಿದಿದ್ದ ಭಾಗವನ್ನು ಗುರುವಾರ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕಂದಾಯ ಅಧಿಕಾರಿಗಳ ಉಸ್ತುವಾರಿಯಡಿ ನೆಲಸಮಗೊಳಿಸಲಾಗಿದೆ.
ಇದೇ ವೇಳೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ನರೇಶ ಕಥೇರಿಯಾ ಮತ್ತು ಉಪಾಧ್ಯಕ್ಷ ಡಾ.ಎಲ್.ಮುರುಗನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗನ್,ದೂರುಗಳನ್ನು ಆಧರಿಸಿ ದಲಿತರ ವಿರುದ್ಧ ತಾರತಮ್ಯದ ಧೋರಣೆಯಿಂದಾಗಿ ಈ ಆವರಣ ಗೋಡೆಯನ್ನು ನಿರ್ಮಿಸಲಾಗಿತ್ತೇ ಎನ್ನುವುದನ್ನು ತಿಳಿದುಕೊಳ್ಳಲು ಆಯೋಗವು ವಿಚಾರಣೆಯನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಗೋಡೆಯ ನಿರ್ಮಾಣಕ್ಕೆ ಸೂಕ್ತ ಸಾಮಗ್ರಿಗಳನ್ನು ಬಳಸಲಾಗಿತ್ತೇ ಎನ್ನುವುದನ್ನು ಮತ್ತು ಗೋಡೆ ಕುಸಿತಕ್ಕೆ ಕಾರಣವನ್ನು ದೃಢಪಡಿಸಿಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳು ಮತ್ತು ಪಿಡಬ್ಲ್ಯೂಡಿಗೆ ಆಯೋಗವು ನಿರ್ದೇಶ ನೀಡಿದೆ ಎಂದೂ ಅವರು ಹೇಳಿದರು.
ಗೋಡೆಯು ಅಪಾಯವನ್ನೊಡ್ಡುತ್ತಿದೆ ಎಂದು ವಿವಿಧ ಸಂಸ್ಥೆಗಳು ಮತ್ತು ಸ್ಥಳೀಯರು ದೂರಿದ್ದರೂ ಅದನ್ನು ಪರಿಶೀಲಿಸಲು ವಿಫಲರಾಗಿದ್ದ ಅಧಿಕಾರಿಗಳಿಗೆ ಮೆಮೊ ಹೊರಡಿಸುವಂತೆಯೂ ಆಡಳಿತಕ್ಕೆ ಸೂಚಿಸಲಾಗಿದೆ. ಕಟ್ಟಡದ ಮಾಲಕನ ವಿರುದ್ಧದ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಮತ್ತು ಈಗಾಗಲೇ ಭರವಸೆ ನೀಡಿರುವಂತೆ ಸಂತ್ರಸ್ತರಿಗೆ ಉದ್ಯೋಗಗಳನ್ನು ಒದಗಿಸುವಂತೆ ಸರಕಾರಕ್ಕೂ ನಿರ್ದೇಶ ನೀಡಲಾಗಿದೆ ಎಂದು ಮುರುಗನ್ ತಿಳಿಸಿದರು.
ದಲಿತರಿಂದ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲು ತನ್ನ ಮನೆಯ ಸುತ್ತ ಈ ಆವರಣ ಗೋಡೆಯನ್ನು ನಿರ್ಮಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಮಂಗಳವಾರವೇ ಬಂಧಿಸಿದ್ದಾರೆ.