ಸನಾತನ ಸಂಸ್ಥೆ ನಿಷೇಧ: ಉದ್ಧವ್ ಠಾಕ್ರೆಗೆ ಕಾಂಗ್ರೆಸ್ ಮುಖಂಡರ ಆಗ್ರಹ

Photo: PTI
ಮುಂಬೈ, ಡಿ.5: ಸನಾತನ ಸಂಸ್ಥೆಯನ್ನು ನಿಷೇಧಿಸುವ ಪ್ರಕ್ರಿಯೆ ಆರಂಭಿಸುವಂತೆ ಕಾಂಗ್ರೆಸ್ ಮುಖಂಡ, ರಾಜ್ಯಸಭೆಯ ಸದಸ್ಯ ಹುಸೈನ್ ದಲ್ವಾಯಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಒತ್ತಾಯಿಸಿದ್ದಾರೆ.
“ಸಿಮಿಯ ರೀತಿಯಲ್ಲೇ ಸನಾತನ ಸಂಸ್ಥೆಯೂ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ಈಗಿರುವ ಭಯೋತ್ಪಾದನೆ ವಿರೋಧಿ ಕಾನೂನಿನಡಿ ಈ ಸಂಘಟನೆಯನ್ನು ನಿಷೇಧಿಸಬೇಕು. ಸನಾತನ ಸಂಸ್ಥೆಯ ಮುಖ್ಯಸ್ಥ ಡಾ. ಜಯಂತ್ ಅಠವಳೆಯ ಬಗ್ಗೆ ಬಹಳಷ್ಟು ಅನುಮಾನಗಳಿವೆ. ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆದಿಲ್ಲ. ಹಂತಕರನ್ನು ಪತ್ತೆಹಚ್ಚಲು ಕೂಲಂಕುಷ ತನಿಖೆಯ ಅಗತ್ಯವಿದೆ” ಎಂದು ಹುಸೈನ್ ಹೇಳಿದ್ದಾರೆ.
ನಿಷೇಧವು ಚಿಂತನೆಯನ್ನು ನಾಶಮಾಡುವುದಿಲ್ಲ. ಆದ್ದರಿಂದ ನಿಷೇಧದಿಂದ ಯಾವುದೇ ಉದ್ದೇಶ ಈಡೇರದು ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ.
ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಎಂಟು ಮಂದಿಯನ್ನು ಬಂಧಿಸಿದ್ದು ಇದರಲ್ಲಿ ಕೆಲವರು ಸನಾತನ ಸಂಸ್ಥೆಯ ಸದಸ್ಯರಾಗಿದ್ದಾರೆ.





