ರಾಜ್ಯಮಟ್ಟದ ಭಾಷಣ ಸ್ಪರ್ಧೆ: ವಫಾಗೆ ಪ್ರಥಮ ಸ್ಥಾನ
ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಗೆ ತೇರ್ಗಡೆ
ಉಡುಪಿ, ಡಿ.5: ಭಾರತದ ಗಣರಾಜ್ಯೋತ್ಸವದ ಪ್ರಯುಕ್ತ ಸಂವಿಧಾನ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ‘ದೇಶಭಕ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ’ ಎಂಬ ವಿಷಯದ ಕುರಿತು ಭಾರತ ಸರಕಾರ ಆಯೋಜಿಸಿರುವ ರಾಷ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿನಿ ವಫಾ ಅವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅಗ್ರಪ್ರಶಸ್ತಿಯೊಂದಿಗೆ ಇದೀಗ ರಾಷ್ಟ್ರ ಮಟ್ಟದ ಸ್ಪರ್ಧೆಗೆ ತೇರ್ಗಡೆಗೊಂಡಿದ್ದಾರೆ.
ಭಾರತ ಸರಕಾರದ ಪರವಾಗಿ ಉಡುಪಿಯ ನೆಹರು ಯುವ ಕೇಂದ್ರ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ತಾಲೂಕು ಮಟ್ಟದ ಸ್ಪರ್ಧೆಯ ಬಳಿಕ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ವಫಾ ಪ್ರಥಮ ಸ್ಥಾನ, ಎಂಜಿಎಂ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಅಮ್ಯಾಲಿನ್ ಬೀನ್ ಥಾಮಸ್ ದ್ವಿತೀಯ ಹಾಗೂ ಮಿಲಾಗ್ರಿಸ್ ಕಾಲೇಜಿನ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಬಿನಯ್ ಎಡ್ಮಂಡ್ ಡಿಕಾಸ್ಟ ತೃತೀಯ ಸ್ಥಾನ ಪಡೆದಿದ್ದರು.
ಇವರಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಫಾ ಅವರು, ಜಿಲ್ಲೆಯನ್ನು ಪ್ರತಿನಿಧಿಸಿ ನ.30ರಂದು ನಡೆದ ರಾಜ್ಯಮಟ್ಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲೂ ಅವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆಲ್ಲುವ ಮೂಲಕ 25,000ರೂ.ಗಳ ನಗದು ಬಹುಮಾನ, ಪ್ರಶಸ್ತಿ ಪತ್ರವನ್ನು ಪಡೆದಿದ್ದರು. ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಅತುಲ್ ನಿಕಮ್ ಅವರು ವಫಾರಿಗೆ ಪ್ರಶಸ್ತಿ ಹಸ್ತಾಂತರಿಸಿದ್ದರು.
ಈ ಮೂಲಕ ವಫಾ ಅವರು ಮುಂದಿನ ಜನವರಿ ತಿಂಗಳಲ್ಲಿ ಹೊಸದಿಲ್ಲಿ ಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿ ಸಲಿದ್ದಾರೆ. 2017ರಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಶ್ರೇಯಸ್ ಕೋಟ್ಯಾನ್ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುದ್ದನ್ನು ಇಲ್ಲಿ ಸ್ಮರಿಸಬಹುದು.