ಪ್ರತಿಭಟನಕಾರರಿಗೆ ಕ್ಷಮಾದಾನ: ಇರಾನ್‌ನ ಸರ್ವೋಚ್ಚ ನಾಯಕ ಖಾಮೆನೈ ಕರೆ

ದುಬೈ,ಡಿ.5: ಇತ್ತೀಚೆಗೆ ನಡೆದ ಸರಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದಕ್ಕಾಗಿ ಬಂಧಿತರಾದವರನ್ನು ಇಸ್ಲಾಮ್ ಪ್ರತಿಪಾದಿಸುವ ಕ್ಷಮಾದಾನದಂತೆ ನಡೆಸಿಕೊಳ್ಳಬೇಕೆಂದು ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮೆನೈ ಕರೆ ನೀಡಿದ್ದಾರೆಂದು ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಇರ್ನಾ ವರದಿ ಮಾಡಿದೆ.
ಗಲಭೆಯಲ್ಲಿ ಯಾವುದೇ ಪಾತ್ರ ವಹಿಸದಿದ್ದರೂ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ನಾಗರಿಕರ ಸಂತ್ರಸ್ತರ ಕುಟುಬಗಳನ್ನು ಹುತಾತ್ಮರೆಂದು ಪರಿಗಣಿಸಬೇಕು ಹಾಗೂ ಅವರ ಕುಟುಂಬಗಳು ಸರಕಾರಿ ಮಾಸಾಶನಗಳನ್ನು ಪಡೆಯಲಿದ್ದಾರೆಂದು ಖಮೇನಿ ತಿಳಿಸಿದ್ದಾರೆ.
ಭದ್ರತಾಪಡೆಗಳು ಪ್ರತಿಭಟನಕಾರರನ್ನು ಪ್ರತಿಭಟನಕಾರರನ್ನು ಹತ್ಯೆಗೈದಿರುವುದಾಗಿ ಇರಾನ್‌ನ ಅಧಿಕಾರಿಗಳು ಮಂಗಳವಾರ ಬಹಿರಂಗವಾಗಿ ಒಪ್ಪಿಕೊಂಡ ಬೆನ್ನಲ್ಲೇ ಖಾಮೆನೈ ಈ ಹೇಳಿಕೆ ನೀಡಿದ್ದಾರೆ.ನವೆಂಬರ್ 15ರಿಂದ ಇರಾನ್‌ನಾದ್ಯಂತ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆಗಳಲ್ಲಿ 208 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ಮಾಡಿತ್ತು. ಆದರೆ ಆ್ಯಮ್ನೆಸ್ಟಿ ಬಿಡುಗಡೆಗೊಳಿಸಿದ ಅಂಕಿಅಂಶಗಳ ಬಗ್ಗೆ ಇರಾನ್ ಆಕ್ಷೇಪ ವ್ಯಕ್ತಪಡಿಸಿದೆ ಹಾಗೂ ರಾಷ್ಟ್ರವ್ಯಾಪಿ ನಡೆದ ಪ್ರತಿಭಟನೆಯಲ್ಲಿ ಆಗಿರುವ ಸಾವುನೋವಿನ ಸಂಖ್ಯೆಗಳನ್ನು ಬಿಡುಗಡೆಗೊಳಿಸಲು ನಿರಾಕರಿಸಿದೆ.







