ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ: ಜಯಪ್ರಕಾಶ್ ಹೆಗ್ಡೆ
ಕುಂದಾಪುರ, ಡಿ.5: ಅಧಿಕಾರದಲ್ಲಿದ್ದಾಗ ಮಾಡಿದ ರೀತಿಯಲ್ಲೇ ಈಗಲೂ ಜನರ ಕೆಲಸ ಮಾಡುತ್ತಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸಲು ಅಧಿಕಾರ ಬೇಕೆಂಬುದಿಲ್ಲ. ಜನರ ಕೆಲಸ ಮಾಡುವುದರಲ್ಲಿ ಸಿಗುವ ಖುಷಿ ಬೇರೊಂದಿಲ್ಲ. ರಾಜಕಾರಣದಲ್ಲಿ ನಿವೃತ್ತಿ ಪಡೆಯುವ ಯೋಜನೆ ನನ್ನ ಮುಂದೆ ಇಲ್ಲ. ನಿರಂತರವಾಗಿ ಜನರ ಕೆಲಸ ಮಾಡುತ್ತಿರುತ್ತೇನೆ. ಹಾಗೆ ಮುಂಬರುವ ಚುನಾ ವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಕೂಡ ಹೊಂದಿದ್ದೇನೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕುಂದಾಪುರದ ಶರೋನ್ ಹೋಟೇಲ್‌ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡುತಿದ್ದರು. ಯಾವ ಪಕ್ಷದಲ್ಲಿ ಚುನಾವಣೆ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬ್ಗೆ ಇನ್ನು ನಿರ್ಧಾರ ಮಾಡಿಲ್ಲ ಎಂದರು.
ಮರಳು ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಅಗತ್ಯ ಇದೆ. ಮೂಕಾಂಬಿಕಾ ಅಭಯಾರಣ್ಯವನ್ನು ಈಗಾಗಲೇ ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸಲಾಗಿದ್ದು, ಕುದುರೆಮುಖ ಹಾಗೂ ಸೋಮೇಶ್ವರ ಅರಣ್ಯ ಪ್ರದೇಶಗಳಿಗೂ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಸಾರ್ವಜನಿಕ ಆಕ್ಷೇಪಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಸಂಸದರ ಹೇಳಿಕೆಗೆ ತಿರುಗೇಟು: ಕುಂದಾಪುರಕ್ಕೆ ಫ್ಲೈಓವರ್ ಅಗತ್ಯ ಇದೆಯೇ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲೆಯಲ್ಲಿರುವ ಏಕೈಕ ಫ್ಲೈಓವರ್ ಇದಾಗಿದೆ. ಇದೀಗ ಫ್ಲೈ ಓವರ್ ಬೇಕೇ ಎಂಬ ಜಿಜ್ಞಾಸೆಗಳನ್ನು ಅನಗತ್ಯವಾಗಿ ಹುಟ್ಟಿ ಹಾಕಲಾಗುತ್ತಿದೆ. ಕುಂದಾಪುರ ನಗರದ ಮುಂದಿನ 50 ವರ್ಷಗಳ ಬೆಳವಣಿಗೆ ಹಾಗೂ ಹೆಚ್ಚಾಗುವ ವಾಹನ ಸಾಂದ್ರತೆಗೆ ಅನುಗುಣ ವಾಗಿ ನೋಡುದಾದರೆ ಪ್ಲೈ ಓವರ್ ಅಗತ್ಯ ಇದೆ ಎಂದರು.
ಕೇಂದ್ರದ ಅನುದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅಂದಾಜು 40 ಕೋಟಿ ರೂ. ವೆಚ್ಚದಲ್ಲಿ 5 ಜಿಲ್ಲೆಗಳಿಗೆ ಒಂದರಂತೆ ಪ್ರಾರಂಭ ವಾಗಲಿರುವ ವಸತಿ ಶಾಲೆಯೊಂದನ್ನು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಸುವ ಕುರಿತು ಮನವಿ ಮಾಡಲಾಗಿದ್ದು, ಉತ್ತಮ ಸ್ಪಂದನೆ ದೊರೆಕಿದೆ. ಇದರಿಂದ ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಅನೂಕೂಲ ವಾಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹಾಗೂ ಕಾರ್ಯದರ್ಶಿ ನಾರಾಜ ರಾಯಪ್ಪನಮಠ ಹಾಜರಿದ್ದರು.
ಜಿಲ್ಲೆಯವರಿಗೆ ಉಸ್ತುವಾರಿ ನೀಡುವುದು ಒಳಿತು
ಜಿಲ್ಲೆಯ ಪ್ರಮುಖ ಯೋಜನೆಗಳಾದ ವಾರಾಹಿ, ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಹಾಗೂ ಒಳಚರಂಡಿ ಯೋಜನೆಯ ಸಮಸ್ಯೆ ಬಗೆಹರಿಸಲು ಸಮಗ್ರ ಚರ್ಚೆಯ ಅಗತ್ಯ ಇದೆ. ಬೈಂದೂರಿನ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಮಾಡುವುದರಿಂದ ಉಡುಪಿ ಹಾಗೂ ಉತ್ತರ ಕನ್ನಡದ ಜಿಲ್ಲೆಯವರಿಗೆ ಅನು ಕೂಲವಾಗಲಿದೆ. ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಬೇಕು. ರಾಷ್ಟ್ರೀಯ ಹೆದ್ದಾರಿಯ ಒತ್ತಡ ಕಡಿಮೆ ಮಾಡಲು ಕರಾವಳಿ ಭಾಗದಲ್ಲಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಈ ಎಲ್ಲ ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಜಿಲ್ಲೆಯವರಿಗೆ ಉಸ್ತುವಾರಿ ಸಚಿವರಾಗಿ ಅವಕಾಶ ನೀಡುವುದು ಉತ್ತಮ ಎಂದು ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ಪಟ್ಟರು.