ಆಸ್ಪತ್ರೆ ಐಸಿಯುನಲ್ಲೇ ವಿವಾಹ: ಕಾರಣ ಏನು ಗೊತ್ತೇ?
ಸಾಂದರ್ಭಿಕ ಚಿತ್ರ
ಪುಣೆ, ಡಿ.6: ಪ್ರೇಮಸಂಬಂಧ ಹೊಂದಿದ್ದ ಮಹಿಳೆಯನ್ನು ಪ್ರಿಯಕರ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ ವಿವಾಹವಾದ ಅಪರೂಪದ ಘಟನೆ ಪುಣೆಯ ಚಕನ್ ಎಂಬಲ್ಲಿ ನಡೆದಿದೆ. ಮಹಿಳೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲೇ ವಿವಾಹ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ಮಧ್ಯೆ ಮಹಿಳೆ ಸೂರಜ್ ನಲವಡೆ ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ಬಲವಂತದಿಂದ ದೈಹಿಕ ಸಂಪರ್ಕ ಸಾಧಿಸಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.
ಮಹಿಳೆ ವಿವಾಹವಾಗುವಂತೆ ಕೇಳಿದಾಗ ಕೆಳಜಾತಿಯವಳು ಎಂಬ ಕಾರಣ ನೀಡಿ ಆರೋಪಿ ವಿವಾಹವಾಗಲು ನಿರಾಕರಿಸಿದ ಎನ್ನಲಾಗಿದೆ. ನವೆಂಬರ್ 27ರಂದು ಮಹಿಳೆ ವಿಷ ಸೇವಿಸಿದ್ದು, ತಕ್ಷಣ ಆಸ್ಪತ್ರೆಗೆ ಕರೆ ತರಲಾಗಿತ್ತು. ಸ್ಥಳೀಯರು ನಲವಡೆಯನ್ನು ಹಿಡಿದು ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಐಸಿಯುಗೆ ಎಳೆದು ತಂದರು. ಹಾರ ಬದಲಾಯಿಸಿಕೊಳ್ಳುವ ಮೂಲಕ ಆಕೆಯನ್ನು ಅಲ್ಲೇ ವಿವಾಹವಾಗುವಂತೆ ಬಲವಂತ ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ. ಇದಾದ ಮೂರೇ ದಿನದಲ್ಲಿ ಮಹಿಳೆ ಜತೆಗಿನ ಸಂಬಂಧ ಕಡಿದುಕೊಂಡು ಆರೋಪಿ ಪರಾರಿಯಾಗಿದ್ದಾನೆ.
ಎರಡು ದಿನಗಳ ಹಿಂದೆ ಮಹಿಳೆ, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376ರ ಅನ್ವಯ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಜತೆಗೆ ಪರಿಶಿಷ್ಟ ಜಾತಿ/ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ವಿರುದ್ಧವೂ ಪ್ರಕರಣ ದಾಖಲಾಗಿದೆ.