ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ್ ಹಾಗೂ ಎರಡು ಎನ್ಕೌಂಟರ್ಗಳು

ಹೈದರಾಬಾದ್, ಡಿ.6: ತೆಲಂಗಾಣದ ವಾರಂಗಲ್ನಲ್ಲಿ ಡಿಸೆಂಬರ್ 2008ರಲ್ಲಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಶಂಕಿತ ಪ್ರೇಮವೈಫಲ್ಯ ಪ್ರಕರಣದಲ್ಲಿ ಆ್ಯಸಿಡ್ ದಾಳಿ ನಡೆಸಲಾಗಿತ್ತು. ಈ ಪ್ರಕರಣದ ಮೂವರು ಶಂಕಿತರನ್ನು ನಂತರ ಎನ್ಕೌಂಟರ್ ಒಂದರಲ್ಲಿ ಸಾಯಿಸಲಾಗಿತ್ತು. ಆಗ ವಾರಂಗಲ್ ಜಿಲ್ಲೆಯ ಎಸ್ಪಿ ಆಗಿದ್ದವರು ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ್.
ಕಾಕತಾಳೀಯವೆಂಬಂತೆ ಪಶು ವೈದ್ಯೆಯೊಬ್ಬರ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಪ್ರಕರಣ ನಡೆದಿರುವ ಪ್ರದೇಶದ ಶಂಶಾಬಾದ್ ಪೊಲೀಸ್ ಠಾಣೆಯು ವಿ.ಸಿ.ಸಜ್ಜನರ್ ಅವರು ಆಯುಕ್ತರಾಗಿರುವ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೇ ಬರುತ್ತದೆ.
ಪಶುವೈದ್ಯೆ ಅತ್ಯಾಚಾರ ಪ್ರಕರಣದ ಎಲ್ಲ ನಾಲ್ಕು ಮಂದಿ ಆರೋಪಿಗಳಾದ ಮುಹಮ್ಮದ್ ಅಲಿ ಅಲಿಯಾಸ್ ಮುಹಮ್ಮದ್ ಆರಿಫ್, ಜೊಲ್ಲು ಶಿವ, ಜೊಲ್ಲು ನವೀನ್ ಕುಮಾರ್ ಹಾಗೂ ಚಿಂತಕುಂಟ ಚೆನ್ನ ಕೇಶವುಲು ಇವರು ಪೊಲೀಸರಿಂದ ತಪ್ಪಿಸಿಕೊಳ್ಳಲೆತ್ನಿಸಿದಾಗ ಅವರನ್ನು ಪೊಲೀಸರು ಎನ್ಕೌಂಟರ್ನಲ್ಲಿ ಸಾಯಿಸಿದ ಸುದ್ದಿ ಹೊರಬೀಳುತ್ತಿದ್ದಂತೆಯೇ ಟ್ವಿಟ್ಟರಿನಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್ ಅವರಿಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
‘‘ಬೆಳಗೆದ್ದ ಕೂಡಲೇ ಒಳ್ಳೆಯ ಸುದ್ದಿ, ದಿಶಾ ಅತ್ಯಾಚಾರಿಗಳನ್ನು ಆಕೆಯ ಮೃತದೇಹ ಪತ್ತೆಯಾದಲ್ಲೇ ಎನ್ಕೌಂಟರ್ ಆಗಿರುವುದು, ಸೆಲ್ಯೂಟ್ ಟಿಎಸ್ ಪೊಲೀಸ್’’ ಎಂದು ಒಬ್ಬ ಟ್ವಿಟ್ಟರಿಗ ಟ್ವೀಟ್ ಮಾಡಿದ್ದರೆ, ಇನ್ನೊಬ್ಬರು ತಮ್ಮ ಟ್ವೀಟ್ನಲ್ಲಿ ‘‘2008: ವಾರಂಗಲ್ ಆ್ಯಸಿಡ್ ದಾಳಿಕೋರರು ಎನ್ಕೌಂಟರ್ಗೆ ಬಲಿ, 2019: ಹೈದರಾಬಾದ್ ದಿಶಾ ಪ್ರಕರಣದ ಆರೋಪಿಗಳು ಎನ್ಕೌಂಟರ್ನಲ್ಲಿ ಹತ. ಹೆಸರು: ವಿ.ಸಿ. ಸಜ್ಜನರ್: ಕೆಲಸ: ನ್ಯಾಯ ಒದಗಿಸುವುದು. ಒಂದು ಬಾರಿ ಒಂದು ಗುಂಡು’’ ಎಂದು ಬರೆದಿದ್ದಾರೆ.