ಎನ್‌ಕೌಂಟರ್‌ಗೆ ಹೈದರಾಬಾದ್ ಕುಖ್ಯಾತ

ಆಂಧ್ರಪ್ರದೇಶ, ಡಿ. 6: ಅವಿಭಜಿತ ಆಂಧ್ರಪ್ರದೇಶಕ್ಕೆ ಎನ್‌ಕೌಂಟರ್‌ನ ಕುಖ್ಯಾತ ಇತಿಹಾಸ ಇದೆ. 1970ರಿಂದ 1990ರ ವರೆಗೆ ನಕ್ಸಲ್ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಹಲವು ಎನ್‌ಕೌಂಟರ್‌ಗೆ ರಾಜ್ಯ ಸಾಕ್ಷಿಯಾಗಿತ್ತು. ಎನ್‌ಕೌಂಟರ್‌ಗಳನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗ, ನ್ಯಾಯಾಲಯ, ನಾಗರಿಕ ಸಮಾಜ ಹಾಗೂ ಮಾಧ್ಯಮಗಳು ಪ್ರಶ್ನಿಸಲು ಆರಂಭಿಸಿದ ಬಳಿಕ ಅದು ನಿಂತಿತ್ತು.
ಹೈದರಾಬಾದ್‌ನಲ್ಲಿ ಕೊನೆಯದಾಗಿ ಎನ್‌ಕೌಂಟರ್ ನಡೆದಿರುವುದು 2015ರಲ್ಲಿ. ಸ್ಥಳೀಯ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಗಲ್ಬಾ-ಎ-ಇಸ್ಲಾಂ ಗುಂಪಿನ ಸ್ಥಾಪಕ ವಿಕರುದ್ದೀನ್ ಅಹ್ಮದ್ ಸಹಿತ ಐವರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿತ್ತು. ಅದೇ ವರ್ಷ ನೆರೆಯ ಆಂಧ್ರಪ್ರದೇಶದಲ್ಲಿ ಇನ್ನೊಂದು ಎನ್‌ಕೌಂಟರ್ ನಡೆದಿತ್ತು. ಚಿತ್ತೂರ್ ಜಿಲ್ಲೆಯ ಚಂದ್ರಗಿರಿಯಲ್ಲಿ 20 ಮಂದಿ ರಕ್ತಚಂದನ ಸಾಗಾಟಗಾರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತು. ವಿಶೇಷ ಕಾರ್ಯಪಡೆ ಪೊಲೀಸರು ಸುಮಾರು 500 ಅಕ್ರಮ ಸಾಗಾಟಗಾರರು ಹಾಗೂ ಮರ ಕಡಿಯುವವರನ್ನು ಬಂಧಿಸಲು ಪ್ರಯತ್ನಿಸಿದಾಗ ಅವರು ದಾಳಿ ನಡೆಸಲು ಪ್ರಯತ್ನಿಸಿದರು. ಇದರಿಂದ ಎನ್‌ಕೌಂಟರ್ ನಡೆಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದರು.
ಈ ಎನ್‌ಕೌಂಟರ್‌ನಲ್ಲಿ ಸಮೀಪದಿಂದ ಗುಂಡು ಹಾರಿಸಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿತ್ತು. ಮೃತಪಟ್ಟವರಲ್ಲಿ ಹೆಚ್ಚಿನವರು ನೆರೆಯ ತಮಿಳುನಾಡಿನ ಕಾರ್ಮಿಕರಾಗಿದ್ದರು. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಎನ್‌ಎಚ್‌ಆರ್‌ಸಿ ಹಾಗೂ ಉಚ್ಚ ನ್ಯಾಯಾಲಯ ಆದೇಶ ನೀಡಿತ್ತು.