ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಿದರೂ ಆಯೋಗ ಗಂಭೀರವಾಗಿ ಪರಿಗಣಿಸಿಲ್ಲ : ಐವನ್ ಡಿ ಸೋಜ
ಮಂಗಳೂರು, ಡಿ.7: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಹಣ ಹಂಚಿಕೆ, ಜಾತಿ, ಧರ್ಮದ ಆಧಾರದಲ್ಲಿ ಮತಯಾಚನೆ ಸೇರಿದಂತೆ ಚುನಾವಣಾ ಅಕ್ರಮಗಳ ಬಗ್ಗೆ 15 ದೂರುಗಳನ್ನು ಕಾಂಗ್ರೆಸ್ ನೀಡಿದೆ. ಆದರೆ ಈ ಎಲ್ಲಾ ದೂರುಗನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.
ಚುನಾವಣಾ ಸಮೀಕ್ಷೆಗಳನ್ನೂ ಮೀರಿ ಕಾಂಗ್ರೆಸ್ ಕನಿಷ್ಠ 10 ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸ ಹೊಂದಿರುವುದಾಗಿ ಐವನ್ ಡಿ ಸೋಜ ತಿಳಿಸಿದ್ದಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ತೀರ ಬಿಗಡಾಯಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ( ಜಿಎಸ್‌ಟಿ) ತೆರಿಗೆಯ ಪಾಲು 5400 ಕೋಟಿ ಇನ್ನೂ ಬಂದಿಲ್ಲಾ. ನರೇಗಾ ಯೋಜನೆಯ ಮೂಲಕ ರಾಜ್ಯಕ್ಕೆ ಬರಬೇಕಾದ ಕೇಂದ್ರದ ಅನುದಾನ 2000 ಕೋಟಿ ರೂ ಇನ್ನೂ ಬಂದಿಲ್ಲಾ .ಇದರಿಂದ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಉದ್ಯೋಗಿಗಳಿಗೆ ಗ್ರಾಮ ಪಂಚಾಯತ್‌ಗಳಲ್ಲಿ ಸಂಬಳ ನೀಡಲು ಹಣ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ .ಅದನ್ನು ಕೇಳಿ ತರಿಸುವ ಶಕ್ತಿ ರಾಜ್ಯದ ಮುಖ್ಯ ಮಂತ್ರಿಗೆ ಇಲ್ಲ. ಅಲ್ಪ ಸಂಖ್ಯಾತರ ಇಲಾಖೆಗೆ ನಿಗದಿ ಪಡಿಸಲಾದ ಅನುದಾನದಲ್ಲಿ ಶೇ 70ನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ಸೇರಿದಂತೆ ಸಾಕಷ್ಟು ಅನುದಾನ ನೀಡದೆ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ 4 ತಿಂಗಳಿನಿಂದ ಸರಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದು ಐವಾನ್ ಟೀಕಿಸಿದರು.
ಅನುದಾನ ಬಿಡುಗಡೆ ಮಾಡದೆ ಯೋಜನೆ ಉದ್ಘಾಟನೆ ಹೇಗೆ:- ರಾಜ್ಯದ ಮುಖ್ಯ ಮಂತ್ರಿ ಡಿ.8ರಂದು ದಕ್ಷಿಣ ಜಿಲ್ಲೆಯಲ್ಲಿ ನೂರಾರು ಕೋಟಿ ರೂಗಳ ಕಾಮಗಾರಿಗೆ ಚಾಲನೆ ನೀಡುತ್ತಾರೆ ಎಂದು ಪ್ರಕಟಣೆ ನೀಡಲಾಗಿದೆ. ಯೋಜನೆ ಹಣ ಮಂಜೂರಾಗದೆ ಕೇವಲ ಪ್ರಸ್ತಾವನೆ ಹಂತದಲ್ಲಿರುವಾಗ ಉದ್ಘಾಟನೆ ಹೇಗೆ ಸಾಧ್ಯ. ಶಾಸಕರ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ ಆದರೆ ಮುಖ್ಯ ಮಂತ್ರಿ ಶಾಸಕರ ಆನುದಾನದ ಯೋಜನೆ ಉದ್ಘಾಟನೆ ಮಾಡಲು ಹೊರಟಿದ್ದಾರೆ ಎಂದು ಐವನ್ ಟೀಕಿಸಿದರು.
ಐಶ್ವರ್ಯ ರೈ ಬಗ್ಗೆ ಈಶ್ವರಪ್ಪ ಹೇಳಿಕೆ ಖಂಡನೀಯ:- ಸರಕಾರದ ಖಾತೆ ಹಂಚಿಕೆಯ ಬಗ್ಗೆ ಕೇಳಿದಾಗ ಐಶ್ವರ್ಯ ರೈಯವರ ಗೌರವಕ್ಕೆ ಚ್ಯುತಿಯಾಗುವ ಮಾನಹಾನಿಕರ ಹೇಳಿಕೆಯನ್ನು ಸಚಿವ ಈಶ್ವರಪ್ಪ ನೀಡುವ ಮೂಲಕ ಆಕೆಯ ಹಾಗೂ ಸಮಸ್ತ ಮಹಿಳೆಯರ ಗೌರವ ಘನತೆ ಗೌರವಕ್ಕೆ ಧಕ್ಕೆಯಾಗುವ ರೀತಿಯ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಈಶ್ವರಪ್ಪ ತಕ್ಷಣ ಕ್ಷಮೆ ಕೇಳಬೇಕು ಎಂದು ಐವನ್ ಡಿ ಸೋಜ ಆಗ್ರಹಿಸಿದ್ದಾರೆ.
ಈ ಬಾರಿ ಕ್ರಿಸ್ಮಸ್ -ದೀಪಾವಳಿ ಜೊತೆಯಾಗಿ ಆಚರಣೆ:- ಮನಪಾ ಚುನಾವಣೆಯ ಹಿನ್ನೆಯಲ್ಲಿ ದೀಪಾಳಿ ಆಚರಿಸಲು ನಿಗದಿ ಪಡಿಸಿದ್ದ ಕಾರ್ಯಕ್ರಮವನ್ನು ಈ ಬಾರಿ ಮುಂದೂಡಿ ಕ್ರಿಸ್ಮಸ್ ಹಬ್ಬದ ಜೊತೆ ಡಿ.16ರಂದು ನಗರದ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.